ಉಡುಪಿ, ಫೆ.06(DaijiworldNews/AK) : ಕಥೊಲಿಕ ಧರ್ಮಪ್ರಾಂತ್ಯ ಉಡುಪಿ ಇದರ ಧರ್ಮಾಧ್ಯಕ್ಷರಾದ ಅತೀ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ಎರಡು ಜುಬಿಲಿ ಮಹೋತ್ಸವಕ್ಕೆ ಭಕ್ತವೃಂದ ಸಜ್ಜಾಗಿದೆ.

ಧರ್ಮಾಧ್ಯಕ್ಷರು 75 ವರ್ಷಗಳ ಆಚರಣೆಯ ಅಮೃತ ಮಹೋತ್ಸವ ಹಾಗೂ ಧರ್ಮಾಧ್ಯಕ್ಷ ದೀಕ್ಷೆಯ 25 ವರ್ಷಗಳ ಬೆಳ್ಳಿ ಹಬ್ಬದ ಮಹೋತ್ಸವ 2025 ರ ಫೆಬ್ರವರಿ 9 ರಂದು ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ತೆರೆದ ಮೈದಾನದಲ್ಲಿ ಜರುಗಲಿದೆ.
ಭಾನುವಾರ ಸಂಜೆ 4 ಗಂಟೆಗೆ ಕೃತಜ್ಞತಾ ಬಲಿಪೂಜೆ ಹಾಗೂ ಸಾರ್ವಜನಿಕ ಸನ್ಮಾನ ಸಮಾರಂಭ ಜರುಗಲಿದ್ದು, ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಭಾರತ ಮತ್ತು ನೇಪಾಳದ ರಾಯಭಾರಿ ಅತೀ ವಂ|ಡಾ|ಲಿಯೊಪೊಲ್ಡೊ ಗಿರೆಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ದೇಶದ ಸುಮಾರು 18 ಮಂದಿ ಧರ್ಮಾಧ್ಯಕ್ಷರುಗಳು, 200ಕ್ಕೂ ಅಧಿಕ ಧರ್ಮಗುರುಗಳು ಹಾಗೂ 4000 ಭಕ್ತಾದಿಗಳು ಭಾಗವಹಿಸಲಿದ್ದು ಧರ್ಮಪ್ರಾಂತ್ಯದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲಾಗಲಿದೆ.
1949 ನವೆಂಬರ್ 12 ರಂದು ಬಂಟ್ವಾಳ ತಾಲೂಕಿನ ಅಗ್ರಾರ್ ನಲ್ಲಿ ಜನಿಸಿದ ಬಿಷಲ್ ಜೆರಾಲ್ಡ್ ಲೋಬೊ ಅವರ ಧಾರ್ಮಿಕ ಜೀವನ 15ನೇ ವಯಸ್ಸಿಗೆ ಆರಂಭವಾಯಿತು. 1977 ರಲ್ಲಿ ಅಂದಿನ ಮಂಗಳೂರು ಬಿಷಪ್ ದಿವಂಗತ ಅತಿ ವಂ|ಡಾ|ಬೆಸಿಲ್ ಎಸ್ ಡಿಸೋಜಾ ಅವರಿಂದ ಧಾರ್ಮಿಕ ದೀಕ್ಷೆಯನ್ನು ಸ್ವೀಕರಿಸಿದರು.