ಕಾಸರಗೋಡು, ಫೆ.06(DaijiworldNews/TA): ಬಂದಡ್ಕ ಕೊಳತ್ತೂರು ಪರಿಸರದಲ್ಲಿ ಕಳೆದ ಎರಡು ವಾರಗಳಿಂದ ಭಯ ಉಂಟುಮಾಡಿದ ಚಿರತೆ ಸುರಂಗ ವೊಂದರಲ್ಲಿ ಹಂದಿಗೆ ಇರಿಸಲಾಗಿದ್ದ ಉರುಳಿಗೆ ಸಿಲುಕಿದ್ದು, ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯಲು ಕಾರ್ಯಾಚರಣೆ ನಡೆಸುವ ಮಧ್ಯೆ ಪರಾರಿಯಾಗಿದೆ. ಬುಧವಾರ ಸಂಜೆ ಘಟನೆ ನಡೆದಿದೆ.


ಖಾಸಗಿ ವ್ಯಕ್ತಿ ಯೋರ್ವರ ಸುರಂಗವೊಂದರಲ್ಲಿ ಯಾರೋ ಕಾಡು ಹಂದಿಗೆಂದು ಉರುಳು(ಕುಣಿಕೆ)ನ್ನು ಇರಿಸಿದ್ದರು. ನೀರು ಕುಡಿಯಲು ಸುರಂಗ ದೊಳಗೆ ತೆರಳಿದ್ದ ಸಂದರ್ಭದಲ್ಲಿ ಚಿರತೆ ಉರುಳಿಗೆ ಸಿಲುಕಿತ್ತು. ಸಂಜೆ ಚಿರತೆಯ ಘರ್ಜನೆ ಕೇಳಿ ಪರಿಸರ ವಾಸಿಗಳು ಗಮನಿಸಿದಾಗ ಚಿರತೆ ಸಿಲುಕಿರುವುದು ಕಂಡುಬಂದಿದೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಅರಣ್ಯ ಇಲಾಖೆ ತಜ್ಞರು, ಅರಿವಳಿಕೆ ತಂಡ, ರಾಫಿಡ್ ಅಕ್ಷನ್ ಫೋರ್ಸ್ ತಂಡವು ಸ್ಥಳಕ್ಕೆ ಆಗಮಿಸಿ ಮುಂಜಾನೆ ಚಿರತೆಗೆ ಅರಿವಳಿಕೆ ಗುಂಡು ಹಾರಿಸಿದಾಗ ಚಿರತೆ ಕುಣಿಕೆ ಸಹಿತ ಪರಾರಿಯಾಗಿದೆ. ಪರಾರಿಯಾದ ಚಿರತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು , ಸ್ಥಳೀಯರು ಶೋಧ ನಡೆಸುತ್ತಿದ್ದಾರೆ.