ಮಂಗಳೂರು,ಫೆ.07(DaijiworldNews/TA): ಪತ್ನಿಯನ್ನು ಹತ್ಯೆಗೈದು ಆತ್ಮಹತ್ಯೆ ಎಂದು ಬಿಂಬಿಸಿದವನಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಸುಳ್ಯ ತಾಲೂಕು ತೋಡಿಕಾನ ಗ್ರಾಮದ ರಾಜ (64) ಶಿಕ್ಷೆಗೊಳಗಾದ ಆರೋಪಿ.

ಈತ ತನ್ನ ಪತ್ನಿ ಕಮಲಾ ಅವರನ್ನು ಕೊಲೆ ಮಾಡಿದ್ದ. ಆರೋಪಿ ರಾಜ ಕುಡಿದು ಬಂದು ತನ್ನ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. 2022ರ ಸೆ. 4ರಂದು ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆಂದು ಅವರಿಬ್ಬರು ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಅಲೆಕ್ಕಿಯ ಮನೆಗೆ ಬಂದಿದ್ದರು. ಮನೆಯ ಯಜಮಾನ ಅವರಿಗೆ ಕೆಲಸ ನೀಡಿದ್ದರು. ಅದರಂತೆ ರಾಜ ಮತ್ತು ಕಮಲಾ ರಬ್ಬರ್ ತೋಟದಲ್ಲಿರುವ ಶೆಡ್ ರೀತಿಯ ಮನೆಯಲ್ಲಿ ಉಳಿದುಕೊಂಡಿದ್ದರು. ಸೆ. 6ರಂದು ಸಂಜೆ 5.30ರ ಬಳಿಕ ಆರೋಪಿ ತನ್ನ ಪತ್ನಿಯ ಜತೆ ಎಂದಿನಂತೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭಿಸಿದ್ದ. ರಾತ್ರಿ 8ಕ್ಕೆ ಕೋಪದಿಂದ ಕಮಲಾಳ ಕುತ್ತಿಗೆ ಒತ್ತಿ ಹಿಡಿದಾಗ ಆಕೆ ನೆಲಕ್ಕೆ ಬಿದ್ದಿದ್ದಳು. ಅವಳ ತಲೆಯನ್ನು ನೆಲಕ್ಕೆ ಜೋರಾಗಿ ಗುದ್ದಿ ಬಳಿಕ ತನ್ನ ಲುಂಗಿಯೊಂದನ್ನು ಹರಿದು ಹಗ್ಗದ ರೀತಿ ಮಾಡಿ ಅದರಿಂದ ಕಮಲಾಳ ಕುತ್ತಿಗೆ ಬಿಗಿದ ಪರಿಣಾಮ ಆಕೆ ಮೃತಪಟ್ಟಿದ್ದಳು. ಆಕೆಯ ಮೃತದೇಹವನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಲು ಯತ್ನಿಸಿದ್ದ.
ಅದು ಸಾಧ್ಯವಾಗದೆ ಮನೆಯಿಂದ ಹೊರಗೆ ತಂದು ಇರಿಸಿದ್ದ. ನೇಣು ಬಿಗಿದ ರೀತಿಯ ಸಾಕ್ಷ್ಯವನ್ನು ಸೃಷ್ಟಿಸಿ ಜಾಗದ ಮಾಲಕರಿಗೆ ತಿಳಿಸಿದ್ದ. ಅನಂತರ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಕೆ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು. ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಇದೊಂದು ಅಸ್ವಾಭಾವಿಕ ಮರಣವೆಂದು ಪ್ರಕರಣ ದಾಖಲಿಸಿಕೊಂಡಿದ್ದರು. ಗಲಾಟೆಯ ವಿಚಾರವನ್ನು ಹಿಂದಿನ ದಿನವೇ ಕಮಲಾ ತನ್ನ ಸಂಬಂಧಿಯೋರ್ವರಿಗೆ ತಿಳಿಸಿದ್ದರು. ಅವರು ಅದನ್ನು ಕಮಲಾ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಅವರ ಮಕ್ಕಳಿಗೂ ತಿಳಿಸಿದ್ದರು. ಹಾಗಾಗಿ ಕಮಲಾ ಮೃತಪಟ್ಟ ಅನಂತರ ಆಕೆಯ ಮಕ್ಕಳು ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ಹಾಗಾಗಿ ದೇರಳಕಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಆ ವರದಿಯ ಅನಂತರ ಕೊಲೆ ಪ್ರಕರಣವಾಗಿ ದಾಖಲಾಗಿತ್ತು. ಸೆ. 6ರಂದು ಪೊಲೀಸರು ಪ್ರಾಥಮಿಕವಾಗಿ ಇದೊಂದು ಅಸ್ವಾಭಾವಿಕ ಮರಣ/ಆತ್ಮಹತ್ಯೆ ಎಂಬುದಾಗಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಶವ ಪರೀಕ್ಷೆ ನಡೆಸಿದ್ದ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ವರ್ಷಾ ಎ. ಶೆಟ್ಟಿ ಅವರು ತಮ್ಮ ವರದಿಯಲ್ಲಿ ‘ಕಮಲಾ ಅವರು ಆತ್ಮಹತ್ಯೆಯಿಂದ ಮೃತಪಟ್ಟಿಲ್ಲ. ಬದಲಾಗಿ ಅವರ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಲಾಗಿದೆ’ ಎಂದು ಉಲ್ಲೇಖೀಸಿದ್ದರು.
3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದ ಅಭಿಯೋಜನೆ ಪರ ಒಟ್ಟು 17 ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು. ಸಾಕ್ಷ್ಯ, ದಾಖಲೆಗಳು, ಪೂರಕ ಸಾಕ್ಷ್ಯ ಹಾಗೂ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶೆ ಸಂಧ್ಯಾ ಎಸ್. ಅವರು ಫೆ. 5ರಂದು ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 302ರ ಅಡಿ ಜೀವಾವಧಿ ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೆ ಮೃತರ ಮಕ್ಕಳಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ.