ಸುಳ್ಯ, ಜೂ 12 (Daijiworld News/MSP): ರಾಜ್ಯ ಸರಕಾರದ ಮಹತ್ವಕಾಂಕ್ಷೆಯ ಸಾಲಮನ್ನಾ ಯೋಜನೆಯಡಿಯಲ್ಲಿ ಸುಳ್ಯ ತಾಲೂಕಿನ ವಾಣಿಜ್ಯ ಬ್ಯಾಂಕ್ಗಳಲ್ಲಿ 1082 ಮಂದಿಗೆ ಮತ್ತು ಸಹಕಾರಿ ಸಂಘಗಳ ಮೂಲಕ ಸಾಲ ಪಡೆದ 14119 ಮಂದಿ ಸೇರಿ ಒಟ್ಟು 15,202 ಮಂದಿಗೆ ಸಾಲಮನ್ನಾ ಯೋಜನೆಯ ಒಂದು ಲಕ್ಷ ಹಣ ಸಂದಾಯ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಹೇಳಿದ್ದಾರೆ.
ಅವರು ಸುಳ್ಯದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಲಮನ್ನಾ ಯೋಜನೆ ಸಿಗದ ಉಳಿದ ರೈತರಿಗೂ ಸಿಗುವಂತೆ ಮಾಡಲು ಕ್ರಮ ಜರುಗಿಸಲು ಮತ್ತು ಖಾತೆಗೆ ನೇರ ಹಣ ಜಮೆ ಆದ ಮಾಹಿತಿಯನ್ನು ರೈತರಿಗೆ ತಿಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಎಲ್ಲಾ ಜಿಲ್ಲೆಗಳಿಗೆ ತೆರಳಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಗಳನ್ನು ನಡೆಸಲಾಗುತ್ತಿದ್ದು ಸಮಸ್ಯೆಗಳುನ್ನು ತಿಳಿದು ಕೆಲವೊಂದು ಕಂದಾಯ ಕಾನೂನುಗಳನ್ನು ಸರಳೀಕರಣ ಮಾಡಲು ಕಾನೂನು ತಿದ್ದುಪಡಿ ಮಾಡಲಾಗುವುದು. ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಅವರು ಹೇಳಿದರು.
ಸರಕಾರಿ ಭೂಮಿಯ ಸಾಗುವಳಿ ಮಾಡಿ ಹಕ್ಕುಪತ್ರ ನೀಡಲಾಗುತ್ತಿದ್ದು 4.38ಸೆಂಟ್ಸ್ ವರೆಗಿನ ಸ್ಥಳವನ್ನು ರೈತರಿಗೆ ಮಂಜೂರು ಮಾಡಲಾಗುತ್ತಿದೆ. ಹೀಗೆ ಸುಳ್ಯ ತಾಲೂಕಿನಲ್ಲಿ 20 ಸಾವಿರ ಎಕ್ರೆ ಭೂಮಿ ಕೃಷಿಕರಿಗೆ ಮಂಜೂರು ಮಾಡಲಾಗಿದೆ. ಸುಳ್ಯದಲ್ಲಿ 94ಸಿ ಯೋಜನೆಯಡಿಯಲ್ಲಿ 5082 ಅರ್ಜಿಗಳಿಗೆ ಹಕ್ಕುಪತ್ರ ಮಂಜೂರುಗೊಂಡಿದೆ. ಸುಮಾರು 4703 94ಸಿ ಅರ್ಜಿಗಳು ತಿರಸ್ಕೃತಗೊಂಡಿದೆ. ಪ್ರತಿ ಗ್ರಾಮ ಮಟ್ಟದಲ್ಲಿ ತಿರಸ್ಕೃತಗೊಂಡಿರುವ ಅರ್ಜಿಗಳನ್ನು ಮರುಪರಿಶೀಲನೆ ಮಾಡಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ತಾಲೂಕಿನ 41 ಗ್ರಾಮಗಳು ಕೂಡ ಪೋಡಿ ಮುಕ್ತ ಗ್ರಾಮಗಳಾಗಿವೆ. ಮುಂದಿನ ಮಳೆಗಾಲದಲ್ಲಿ ಸಂಭವಿಸುವ ಪ್ರಕೃತಿ ಅವಘಡಗಳನ್ನು ಎದುರಿಸಲು ಸರಕಾರ ಸಂಪೂರ್ಣ ಸಿದ್ದವಾಗಿದೆ. ಅಲ್ಲದೇ ಪ್ರತಿ ತಾಲೂಕಿಗೆ ೨೦ ಲಕ್ಷಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇನ್ನೂ 24 ಲಕ್ಷ ಬಿಡುಗಡೆ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಸಹಾಯಕ ಕಮಿಷನರ್ ಕೃಷ್ಣಮೂರ್ತಿ, ಸುಳ್ಯ ತಹಶೀಲ್ದಾರ್ ಕುಂಞಿ ಆಹಮ್ಮದ್ ಉಪಸ್ಥಿತರಿದ್ದರು.