ಮಂಗಳೂರು, ಫೆ.07 (DaijiworldNews/AA): ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ನಂಬಿಸಿ 46,00,000 ರೂ. ಹಣವನ್ನು ವಂಚಿಸಿರುವ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಕರಣದಲ್ಲಿ ಭಾಗಿಯಾದ ಕೇರಳ ಮೂಲದ ಜುನೈದ ವಿ ಕೆ ಎಂಬಾತನನ್ನು ಪತ್ತೆ ಮಾಡಿ ದಸ್ತಗಿರಿ ಕ್ರಮ ಜರುಗಿಸಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಯಾರೋ ಅಪಚಿರಿತ ವ್ಯಕ್ತಿ ವಾಟ್ಸ್ ಆ್ಯಫ್ ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ತಿಳಿಸಿ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸುವ ಬಗ್ಗೆ, ದೂರುದಾರರಿಂದ ಹಂತ ಹಂತವಾಗಿ ಒಟ್ಟು 46,00,000 ರೂ. ಹಣವನ್ನು ಪಡೆದು ವಂಚನೆ ಮಾಡಿರುವುದಾಗಿದೆ. ದೂರುದಾರು ನೀಡಿದ ದೂರಿನಂತೆ ಮಂಗಳೂರು ನಗರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಲಂ 66(ಸಿ) 66(ಡಿ) ಐಟಿ ಆಕ್ಟ್ ಮತ್ತು 308(2), 318(2), 336(3), 112 ಬಿ.ಎನ್.ಎಸ್ ಅಡಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರಿಂದ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರರ ವಿವರವನ್ನು ಸಂಗ್ರಹಿಸಿ ನೋಡಿದಾಗ ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿಗೆ 10,00,000ರೂ. ಹಣ ವರ್ಗಾವಣೆಯಾಗಿದೆ. ನಂತರ ಸದ್ರಿ ಬ್ಯಾಂಕ್ ಖಾತೆಯಿಂದ ಕೇರಳ ಮೂಲದ ಆಯಿಷಾ ಹಾದಿಯಾ ಎಂಬಾತಳ ಬ್ಯಾಂಕ್ ಖಾತೆಗೆ 5,00,000 ರೂ. ಹಣ ಬಂದಿದೆ. ಈ ಬಗ್ಗೆ ತನಿಖೆ ಕೈಗೊಂಡಾಗ ಆಯಿಷಾ ಹಾದಿಯಾರವರ ಗಂಡ ಜುನೈದ ಎಕೆ (32) ದುಬೈನಲ್ಲಿರುವ ಬಾಬು ಎಂಬಾತನ ನಿರ್ದೇಶನದಂತೆ ಹಣವನ್ನು ಇಬ್ಬರು ಸೇರಿ ವಿಥ್ ಡ್ರಾ ಮಾಡಿ ಮನೀಜ್ ಎಂಬಾತನಿಗೆ ನೀಡಿ, ಪ್ರತಿಯಾಗಿ 5,000 ರೂ.ಗಳನ್ನು ಕಮಿಷನ್ ಪಡೆದಿರುವದಾಗಿದೆ.
ಸದ್ರಿ ಕಾರ್ಯಾಚರಣೆಯು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಐಪಿಎಸ್, ಡಿಸಿಪಿ (ಕಾ&ಸು) ಸಿದ್ಧಾರ್ಥ ಗೋಯಲ್, ಡಿಸಿಪಿ (ಅ&ಸಂ) ರವಿಶಂಕರ್ ರವರ ಮಾರ್ಗದರ್ಶನದಂತೆ, ಸೆನ್ ಠಾಣಾಧಿಕಾರಿಯಾದ ಎಸಿಪಿ ರವೀಶ್ ನಾಯಕ, ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಸತೀಶ್ ಎಂ ಪಿ ಮತ್ತು ಪೊಲೀಸ್ ಉಪ ನಿರೀಕ್ಷಕರಾದ ಮೋಹನ್ ರವರ ನೇತೃತ್ವದಲ್ಲಿ ಸದ್ರಿ ಪ್ರಕರಣದಲ್ಲಿ ಇನ್ನುಳಿದ ಆರೋಪಿತರ ಪತ್ತೆಗೆ ತನಿಖೆ ಮುಂದುವರೆದಿರುತ್ತದೆ.