ಮಂಗಳೂರು,ಫೆ.08(DaijiworldNews/TA): ನಗರದ ಕುದ್ರೋಳಿಯಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಯುತ್ತಿರುವ ಆರೋಪದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಅವರು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.



ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿದ್ದ ಈ ಕಸಾಯಿಖಾನೆಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚನೆ ಮೇರೆಗೆ ಕೆಲವು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಲಾಗಿತ್ತು. ಆದರೆ ಇತ್ತೀಚೆಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮೇಯರ್ ಅವರಿಗೆ ಕುದ್ರೋಳಿಯ ಕಸಾಯಿಖಾನೆಯಲ್ಲಿ ಅಕ್ರಮವಾಗಿ ಪ್ರಾಣಿವಧೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇಯರ್ ಅವರು ಕೆಲ ಮನಪಾ ಸದಸ್ಯರು ಹಾಗೂ ಮನಪಾ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಕಸಾಯಿಖಾನೆಯಲ್ಲಿ ಯಾವುದೇ ಪ್ರಾಣಿ ವಧೆ ನಡೆಯುತ್ತಿರಲಿಲ್ಲ. ಆದರೆ ಸಮೀಪದಲ್ಲಿ ವ್ಯಕ್ತಿಯೊಬ್ಬರು ಶೆಡ್ವೊಂದರಲ್ಲಿ ಅಕ್ರಮವಾಗಿ ಪ್ರಾಣಿ ವಧೆ ಮಾಡುತ್ತಿರುವುದು ಕಂಡುಬಂದಿದೆ. ಅಲ್ಲಿ ಪ್ರಾಣಿಗಳ ತಲೆ, ಕೊಂಬುಗಳು ಪತ್ತೆಯಾಗಿವೆ ಎಂದು ಮೇಯರ್ ಮಾಹಿತಿ ನೀಡಿದ್ದಾರೆ. ಈ ಕಸಾಯಿಖಾನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುವುದು. ಅಲ್ಲದೆ ಈ ಅಕ್ರಮ ಕಟ್ಟಡವನ್ನು ಧ್ವಂಸಗೊಳಿಸಲಾಗುವುದು ಎಂದು ಮೇಯರ್ ತಿಳಿಸಿದ್ದಾರೆ.