ಸುಳ್ಯ, ಜೂ 12 (Daijiworld News/MSP): ಸುಳ್ಯ ನಗರದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾಮ ಮತ್ತು ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ನಗರ ಪಂಚಾಯತ್ ಹೊಸ ಆಡಳಿತ ಅಧಿಕಾರ ವಹಿಸಿಕೊಂಡ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ನ.ಪಂ ಬಿಜೆಪಿ ಬೆಂಬಲಿತ ಚುನಾಯಿತ ಸದಸ್ಯರಿಗೆ ತರಭೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಪತ್ರಕರ್ತರ ಜತೆ ಮಾತನಾಡಿದರು. ಎರಡು ಸಮಸ್ಯೆಗಳಿಗೆ ಈ ಹಿಂದಿನ ಆಡಳಿತ ಅವಧಿಯಲ್ಲಿ ಪರಿಹಾರ ಕಂಡುಕೊಳ್ಳುವ ಸಂದರ್ಭ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಅದಕ್ಕೆ ತಡೆ ಒಡ್ಡಲಾಯಿತು. ನಗರ ಪಂಚಾಯತ್ನಲ್ಲಿ ಉತ್ತಮ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ರಾಜಕೀಯ ಕಾರಣದಿಂದ ಅವರನ್ನು ಎತ್ತಂಗಡಿ ಮಾಡಿದ ಪರಿಣಾಮ ಇಲ್ಲಿನ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದ ಅವರು ಕೇಂದ್ರ ಸರಕಾರದ ಆಯುಷ್ಮಾನ್ ಯೋಜನೆಯಡಿ ಬಡವರ ಚಿಕಿತ್ಸೆಗೆ ನೆರವಾಗುವ ಅತ್ಯುತ್ತಮ ಕಾರ್ಯಕ್ರಮ ಜಾರಿ ಮಾಡಿದ್ದರೂ ಅದರ ಅನುಷ್ಠಾನಕ್ಕೆ ರಾಜ್ಯ ಸರಕಾರ ಸಹಕಾರ ನೀಡುತ್ತಿಲ್ಲ. ಸರಕಾರಿ ಆಸ್ಪತ್ರೆಗೆ ದಾಖಲಾಗಿ ಪ್ರಮಾಣಪತ್ರ ಪಡೆದು ಖಾಸಾಗಿ ಆಸ್ಪತ್ರೆಗೆ ದಾಖಲಿಸುವ ನಿಯಮ ಹೇರಿದೆ.
ಇದು ಹಲವರಿಗೆ ತೊಂದರೆ ಆಗಿದೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಮ್ಮಿಶ್ರ ಸರಕಾರದಿಂದ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಕಚ್ಚಾಟದಲ್ಲೇ ಮುಳುಗಿದೆ. ಸಿದ್ದರಾಮಯ್ಯ ಅವರ ವರ್ತನೆಯ ಬಗ್ಗೆ ದೆವೇಗೌಡರು ರಾಹುಲ್ ಗಾಂಧಿ ಅವರಿಗೆ ದೂರು ನೀಡಿದ್ದಾರೆ ಸಚಿವ ಸಂಪುಟ ವಿಸ್ತರಣೆಗೆ ದಿನ ನಿಗದಿಯಾಗಿದ್ದರೂ ಮುಂದೂಡುವ ಪರಿಸ್ಥಿತಿ ಬಂದಿದೆ. ದೇವೆಗೌಡರ ಸೋಲಿಗೆ ಕಾಂಗ್ರೆಸ್, ಖರ್ಗೆ ಸೋಲಿಗೆ ಜೆಡಿಎಸ್ ಕಾರಣ ಎಂದು ಪೈತ್ರಿ ಪಕ್ಷದೊಳಗೆ ಆರೋಪಗಳು ನಾಯಕರು ಮಾಡುತ್ತಿದ್ದಾರೆ. ಆಡಳಿತ ಯಂತ್ರ ಸಂಪೂರ್ಣ ಸ್ತಬ್ದ ವಾಗಿದೆ. ಅಲ್ಲದೇ ಜಿಂದಾಲ್ ಕಂಪೆನಿಗೆ 3 ಸಾವಿರಕ್ಕಿಂತಲೂ ಹೆಚ್ಚು ಎಕರೆ ಕೃಷಿ ಭೂಮಿಯನ್ನು ಬಿಡಿಕಾಸಿಗೆ ಮಾರಾಟ ಮಾಡಿ ಬಹುದೊಡ್ಡ ಅಕ್ರಮ ಎಸಗಿದೆ. ಇದರ ವಿರುದ್ದ ವಿಧಾನಸೌಧದ ಎದುರು ಬಿಜೆಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ಮನೆಗೂ ಮುತ್ತಿಗೆ ಹಾಕಲಾಗುವುದು ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.