ಕಾರ್ಕಳ, ಫೆ.08 (DaijiworldNews/AA): ಹೆಸರಿಗಷ್ಟೇ ಇದು ಅಮೃತಯೋಜನೆ. ಕಾರ್ಕಳದ ನಾಗರಿಕರ ಪಾಲಿಗೆ ಇದು ಅಕ್ಷರಶಃ ವಿಷವಾಗಿ ಪರಿಣಮಿಸಿದೆಯೇ? ಎಂಬ ಯಕ್ಷಪ್ರಶ್ನೆ ಸಹಜವಾಗಿ ಕಾಡುತ್ತಿದೆ.



ಇದಕ್ಕೆ ಇಂಬು ನೀಡಿರುವಂತೆ ಕಾರ್ಕಳ ನಗರದಲ್ಲಿ ಅಮೃತಯೋಜನೆಯ ಹೆಸರಿನಲ್ಲಿ ಅಳವಡಿಸುತ್ತಿರುವ ಪೈಪ್ ಲೈನ್ ಕಾಮಗಾರಿಯ ವೈಫಲ್ಯದಿಂದ ಹಲವೆಡೆಗಳಲ್ಲಿ ಒಳಚರಂಡಿ ಚೆಂಬರ್ ಹಾಗೂ ಅದರ ಪೈಪ್ ಒಡೆದು ಹೋಗಿದ್ದು, ದುರಸ್ಥಿ ಕಾರ್ಯ ನಡೆಸದೇ ಹೋದುದರಿಂದ ಹಲವು ಬಾವಿಗಳಿಗೆ ಒಳಚರಂಡಿಯ ತ್ಯಾಜ್ಯ ನೀರು ವಿಲೀನಗೊಂಡಿದೆ. ದೈನಂದಿನ ಬಳಕೆಗೆ ಹಾಗೂ ಆಹಾರ ಸಿದ್ಧಪಡಿಸಲು ಇದ್ದಂತಹ ಬಾವಿಯ ನೀರು ಮಾಳಿನ್ಯಗೊಂಡಿರುವುದು ನಾಗರಿಕರು ಆಕ್ರೋಶಗೊಂಡಿದ್ದಾರೆ.
ನಗರದ ರಾಮಸಮುದ್ರದಿಂದ ನ್ಯಾಯಾಲಯ ರಸ್ತೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಅಮೃತಯೋಜನೆಯಡಿಯಲ್ಲಿ ಬೃಹತ್ ಪೈಪ್ ಲೈನ್ ಅಳವಡಿಸಲಾಗಿದೆ. ಕೆಲವೆಡೆಗಳಲ್ಲಿ ಇನ್ನು ಹೊಂಡ ಮುಚ್ಚದೇ ಹಾಗೆಯೇ ಬಿಡಲಾಗಿದೆ. ಹೊಂಡ ಮುಚ್ಚಿರುವ ಭಾಗಗಳಿಗೆ ಜಲ್ಲಿ ತುಂಬಿಸಿ ನೀರು ಹಾಯಿಸದೇ ಹಾಗೆಯೇ ಬಿಟ್ಟಿರುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಸಂಪೂರ್ಣ ಧೂಳುಮಯವಾಗಿರುವುದರಿಂದ ಕೆಲ ನಾಗರಿಕರಲ್ಲಿ ಆರೋಗ್ಯ ಸಮಸ್ಯೆ ಎದುರಾಗಿರುವ ಅಂಶ ಬೆಳಕಿಗೆ ಬಂದಿದೆ.
ಇದೇ ರಸ್ತೆಯಲ್ಲಿ ಅಮೃತಯೋಜನೆಯಡಿಯಲ್ಲಿ ಪೈಪ್ ಅಳವಡಿಸಿದ ಸಂದರ್ಭದಲ್ಲಿ ಎಣ್ಣೆಹೊಳೆ ಏತನೀರಾವರಿ ಯೋಜನೆಯ ಬೃಹತ್ ಪೈಪ್ ಒಡೆದು ಹಾಕಿ ವಾರ ಕಳೆದರೂ ದುರಸ್ಥಿ ಪಡಿಸದ ಪರಿಣಾಮವಾಗಿ ಭಾರೀ ಪ್ರಮಾಣದಲ್ಲಿ ಕುಡಿಯುವ ನೀರು ಪೋಲಾಗುತ್ತಿದೆ.
ಅಮೃತಯೋಜನೆಯ ಕಾಮಗಾರಿ ತೆಳ್ಳಾರು ರಸ್ತೆಗೆ ವಿಸ್ತರಣೆ ಮಾಡಿದ ಸಂದರ್ಭದಲ್ಲಿ ಅಲ್ಲಿ ಒಂದಿಷ್ಟು ಸಮಸ್ಸೆ ಮತ್ತಷ್ಟು ಬಿಗಡಾಯಿಸಿದೆ. ಒಳಚರಂಡಿ ಚೇಂಬರ್ ಹಾನಿಗೊಳಿಸಿ ಪೈಪ್ ಲೈನ್ ಅಳವಡಿಸಿದ್ದು, ತಳಭಾಗದಲ್ಲಿ ಒಳವರಂಡಿ ಪೈಪ್ ಹಾನಿಗೊಳಗಾಗಿ ಹರಿದು ಹೋಗುವ ತ್ಯಾಜ್ಯ ನೀರು ಪರಿಸರದ ಹಲವು ಬಾವಿಗಳಿಗೆ ಲೀನವಾಗಿದೆ.
ಕಾರ್ಕಳ ಪುರಸಭೆ, ಕರ್ನಾಟಕ ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ಮಂಡಳಿ ಹಾಗೂ ಎಣ್ಣೆಹೊಳೆ ನೀರಾವರಿ ಯೋಜನೆಯ ಅಧಿಕಾರಿಗಳ ಸಮನ್ವಯ ಕೊರತೆ ಪ್ರಮುಖ ಕಾರಣವಾಗಿದೆ ಎಂಬವುದು ಮೇಲ್ನೋಟಕ್ಕೆ ಕಂಡುಬರುವುದು ನೈಜ ವಿಚಾರವಾಗಿದೆ.
ನಾಗರಿಕರಿಂದ ಪ್ರತಿರೋಧ
ಕೇವಲ ಪೈಪ್ಲೈನ್ ಅಳವಡಿಸುವುದು ಅಮೃತಾ ಯೋಜನೆಯ ಕಾಮಗಾರಿಯ ಮಾನದಂಡವಲ್ಲ. ಕಾಮಗಾರಿ ನಡೆಸುವ ಸಂದರ್ಭದಲ್ಲಿ ರಸ್ತೆ ಹಾಗೂ ಅದರ ತಳಭಾಗದಲ್ಲಿ ಇರುವಂತಹ ಇತರ ಇಲಾಖೆಗಳ ಹಾಗೂ ಖಾಸಗಿ ಸೊತ್ತುಗಳು ಹಾನಿಗೊಳಗಾದರೆ ಅದರ ದುರಸ್ಥಿ ಕಾಮಗಾರಿಯನ್ನು ಆ ಕೂಡಲೇ ಮಾಡುವುದು ಅಮೃತಯೋಜನೆಯ ಉಸ್ತುವಾರಿ ವಹಿಸಿಕೊಂಡಿರುವ ಕರ್ನಾಟಕ ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ಮಂಡಳಿಯ ಜವಾಬ್ದಾರಿಯಾಗಿದೆ ಎಂಬುವುದನ್ನು ಅದರ ಉಪಯಂತರರು ಮರೆಯಬಾರದು.
ನಾಗರಿಕರು ಈ ಕುರಿತು ದೂರು ನೀಡಿದರೆ ಸ್ಪಂದಿಸುವ ಬದಲಾಗಿ ಮತ್ತೊಂದು ಇಲಾಖಾಧಿಕಾರಿಗಳು ಕಾಮಗಾರಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಮಾಡುವುದು ಸಮಂಜಸವಲ್ಲ. ಕಾಮಗಾರಿ ಆರಂಭಿಸುವ ಮುನ್ನ ಕಾರ್ಕಳ ಪುರಸಭಾ ಮುಖ್ಯಾಧಿಕಾರಿಯವರ ಗಮನಕ್ಕೂ ತರಬೇಕು. ಅವರು ಸಂಬಂಧ ಪಟ್ಟ ಇಲಾಖೆಯವರಿಗೆ ಸೂಚನೆ ನೀಡುತ್ತಾರೆ. ಇದ್ಯಾವುದೇ ಪ್ರಕ್ರಿಯೆಗಳು ನಡೆಯದೇ ಹೋದುದರಿಂದ ಈ ಸಮಸ್ಯೆ ಜೀವಂತವಾಗಿರಲು ಹಾಗೂ ಅದರ ನೋವು ಸಾರ್ವಜನಿಕರು ಅನುಭವಿಸುವಂತಾಗಿದೆ.
ತೆಳ್ಳಾರು ರಸ್ತೆಯಲ್ಲಿ ಕಾಮಗಾರಿ ಆರಂಭಿಸಿ 3 ದಿನಗಳು ಕಳೆದರೂ ಒಡೆದು ಹೋದ ಒಳಚರಂಡಿ ಪೈಪ್ ದುರಸ್ಥಿಪಡಿಸದೇ ಹಾಗೆಯೇ ಬಿಟ್ಟು ಬೋಗಿರುವ ಕ್ರಮಕ್ಕೆ ನಾಗರಿಕರು ಪ್ರಬಲ ವಿರೋಧ ವ್ಯಕ್ತಪಡಿಸಿದರು. ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ನೇತೃತ್ವದಲ್ಲಿ ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆದಿತ್ತು. ಆಸಂದರ್ಭದಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರದೀಪ್ ರಾಣೆ ಅವರು ಆಗಮಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಇಷ್ಟಾದರೂ ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಆಗಮಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಉಡುಪಿ ಜಿಲ್ಲಾಧಿಕಾರಿಗೆ ದೂರು
ತೆಳ್ಳಾರು ರಸ್ತೆಯಲ್ಲಿ ಆರಂಭಿಸಿದ ಅಮೃತ ಯೋಜನೆಯಿಂದಾಗಿ ಹಲವು ಮನೆಗಳ ಬಾವಿಗಳ ಕುಡಿಯುವ ನೀರು ಕಲುಷಿತಗೊಂಡಿದೆ. ಅಮೃತಯೋಜನೆ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ನಡೆಸಿದ ಕಾಂಗಾರಿ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದೆ. ಇಷ್ಟೊಂದು ಗಂಭೀರ ಸಮಸ್ಯೆ ಎದುರಾಗಿದ್ದರೂ ಘಟನಾ ಸ್ಥಳಕ್ಕೆ ಯಾವುದೇ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದೇ ಕರ್ತವ್ಯ ನಿಷ್ಠೆ ಮರೆತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.