ಕಡಬ, ಜೂ 12 (Daijiworld News/SM): ಸ್ನೇಹಿತರೊಂದಿಗೆ ಕುಮಾರಧಾರ ನದಿಗೆ ಸ್ನಾನಕ್ಕೆಂದು ಇಳಿದಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಡಬದ ಆಲಂಕಾರು ಸಮೀಪದ ಶಾಂತಿಮೊಗರು ಎಂಬಲ್ಲಿ ಸಂಭವಿಸಿದೆ. ಮೃತ ಬಾಲಕನನ್ನು ಸವಣೂರು ಸಮೀಪದ ಪರಣೆ ನಿವಾಸಿ ಹಮೀದ್ ಎಂಬವರ ಪುತ್ರ ಅಶ್ಫಾಕ್ ಎಂದು ಗುರುತಿಸಲಾಗಿದೆ.
ಸವಣೂರು ಸರ್ಕಾರಿ ಶಾಲೆ ವಿದ್ಯಾರ್ಥಿಯಾಗಿದ್ದ ಅಶ್ಫಾಕ್ ತನ್ನ ಸ್ನೇಹಿತರೊಂದಿಗೆ ಶಾಂತಿಮೊಗರು ಸೇತುವೆಯ ಬಳಿ ಸ್ನಾನಕ್ಕೆ ಇಳಿದಿದ್ದ. ಈ ವೇಳೆ ನೀರಿನ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಆ ಬಳಿಕ ಸ್ಥಳೀಯ ಈಜುಗಾರರು ಬಾಲಕನಿಗಾಗಿ ಶೋಧ ನಡೆಸಿದಾಗ ಮೃತದೇಹ ಕಂಡುಬಂದಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಸೇತುವೆಯಲ್ಲಿ ನೀರು ಹೆಚ್ಚಾಗಿದ್ದು ಇದು ಬಾಲಕರ ಅರಿವಿಗೆ ಬಾರದೆ ನೀರಿನ ಆಟಕ್ಕೆ ಇಳಿದಿದ್ದಾರೆ. ಇದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.