ಮಂಗಳೂರು, ಫೆ.09 (DaijiworldNews/AA): ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಿಲ್ಪಾಡಿ ಗ್ರಾಮ ಪಂಚಾಯತ್ ಬಳಿಯ ಕೆ.ಎಸ್. ರಾವ್ ನಗರ ತಿರುವಿನ ರಸ್ತೆಯಲ್ಲಿ ಟೆಂಪೋ ರಿಕ್ಷಾ ಹಾಗೂ ಸ್ಕೂಟರ್ ನಡುವೆ ಗುರುವಾರ ಸಂಭವಿಸಿದ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸವಾರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮಮತಾ ಬಂಗೇರ (42) ಮೃತ ಸ್ಕೂಟರ್ ಸವಾರೆ.
ಟೆಂಪೋ ರಿಕ್ಷಾವೊಂದು ಹಿಂಬದಿಯಿಂದ ಬಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಹಿಂದೆ ಮುಂಬಯಿಯಲ್ಲಿ ವಾಸವಿದ್ದ ಮಮತಾ ಅವರು ಕಳೆದ ಕೆಲವು ಸಮಯದಿಂದ ಶಿಮಂತೂರು ಬಳಿ ನೂತನವಾಗಿ ಮನೆ ನಿರ್ಮಿಸಿಕೊಂಡು ತಮ್ಮ ಪುತ್ರಿಯೊಂದಿಗೆ ವಾಸವಾಗಿದ್ದರು. ಮಹಿಳಾ ಸ್ವಸಹಾಯ ತಂಡ ಹಾಗೂ ಇತರ ಸಾಮಾಜಿಕ ಸಂಘಟನೆಯಲ್ಲಿ ಅವರು ಸಕ್ರಿಯರಾಗಿದ್ದರು.
ಅವರ ಪತಿ ಮೈಸೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಮಗಳು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.