ಪುತ್ತೂರು, ಫೆ.10 (DaijiworldNews/AA): ಕಾರು ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಘಟನೆ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಯಲ್ಲಿ ಫೆ.8 ರಂದುನಡೆದಿದೆ.

ಶಿರಾಡಿ ಗ್ರಾಮದ ಮಿತ್ತನಾಜೆ ಕೊಟ್ಟಾಯಿಲ್ ನಿವಾಸಿ ಕೆ.ಜೆ.ಜಾನ್ (59) ಮೃತ ದುರ್ದೈವಿ.
ಶಿರಾಡಿ ಪೇಟೆಗೆ ಬಂದಿದ್ದ ಜಾನ್ ಅವರು ಮನೆಗೆ ಹಿಂತಿರುಗುತ್ತಿದ್ದು, ಶಿರಾಡಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರು ಯುಟರ್ನ್ ತೆಗೆದುಕೊಳ್ಳುತ್ತಿದ್ದಾಗ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕಾರು ಹಿಂದಿನಿಂದ ಢಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡಿದ್ದ ಜಾನ್ ಅವರನ್ನು ನೆಲ್ಯಾಡಿಯ ಆಸ್ಪತ್ರೆಗೆ ಕರೆತರಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಅವರು ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮೃತರು, ತಂದೆ, ಪತ್ನಿ, ಮೂವರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಅಪಘಾತ ನಡೆದ ಸಂದರ್ಭ ಮಾಜಿ ಸಂಸದ ನಳಿನ್ಕುಮಾರ್ ಕಟೀಲು ಅವರು ಬೆಂಗಳೂರಿನಿಂದ ಮಂಗಳೂರಿಗೆ ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಜತೆಗಿದ್ದ ಇನ್ನೊಂದು ವಾಹನದಲ್ಲಿ ಗಾಯಾಳುವನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.