ಉಡುಪಿ, ಫೆ.10 (DaijiworldNews/AA): ಒಂದೂವರೆ ವರ್ಷಗಳ ಹಿಂದೆ ಕರಾವಳಿ ಜಂಕ್ಷನ್ ಬಳಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕೊಪ್ಪಳ ಜಿಲ್ಲೆ ಬಿಳಕಲ್ ಕುಷ್ಟಗಿ ನಿವಾಸಿಗಳಾದ ಕನಕಪ್ಪ ಹನುಮಂತ ರೋಡಿ(46), ಯಮನೂರ ತಿಪ್ಪಣ್ಣ ಮಾರಣ ಬಸರಿ (24), ಯಮನೂರಪ್ಪ ಜೇಡಿ ಯಾನೆ ದೊಡ್ಡ ಯಮನೂರಪ್ಪ (26) ಬಂಧಿತ ಆರೋಪಿಗಳು.
2023ರ ಅ.16ರಿಂದ ಅ.17ರ ಬೆಳಗ್ಗೆ 8.30ರ ಮಧ್ಯಾವಧಿಯಲ್ಲಿ ಕರಾವಳಿ ಜಂಕ್ಷನ್ ಬಳಿ ಕಿತ್ತೂರ ಸಿದ್ದಪ್ಪ ಶಿವನಪ್ಪ ಹುಬ್ಬಳ್ಳಿ ಅವರನ್ನು ಯಾರೋ ಅಪರಿಚಿತರು ಆಯುಧದಿಂದ ಬಲ ಕೈಯನ್ನು ಕಡಿದು ಕೊಲೆ ಮಾಡಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳೆದು ಹೋದ ಒಂದು ಬಟ್ಟೆ ವಿಚಾರದಲ್ಲಿ ಮೃತ ಕಿತ್ತೂರ ಸಿದ್ದಪ್ಪ ಶಿವನಪ್ಪನು 2ನೇ ಆರೋಪಿ ಯಮನೂರ ತಿಪ್ಪಣ್ಣ ಮಾರಣ ಬಸರಿಯ ಸ್ನೇಹಿತ ಚಿನ್ನು ಪಾಟೇಲ್ ಹುಬ್ಬಳ್ಳಿ ಅವರಿಗೆ ರಾತ್ರಿ 12 ಗಂಟೆ ಸಮಯದಲ್ಲಿ ಹಲ್ಲೆ ಮಾಡಿದ್ದ. ಈ ಬಗ್ಗೆ ಪ್ರಶ್ನಿಸಲು ಹೋದ 2ನೇ ಆರೋಪಿಗೆ ಕಿತ್ತೂರ ಸಿದ್ದಪ್ಪ ಹಲ್ಲೆ ನಡೆಸಿದ್ದ.
ಹಲ್ಲೆ ಮಾಡಿದ ದ್ವೇಷದಿಂದ ಮರುದಿನ ಬೆಳಗ್ಗೆ ಬಂಧಿತ ಮೂವರು ಆರೋಪಿಗಳು ಸೇರಿ ಸಿದ್ದಪ್ಪನನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿದ್ದರು. ಆರೋಪಿ ಯಮನೂರ ತಿಪ್ಪಣ್ಣನು ಕೊಡಲಿಯಿಂದ ಹಲ್ಲೆ ನಡೆಸಿದ ಪರಿಣಾಮ ಸಿದ್ದಪ್ಪ ಸಾವನ್ನಪ್ಪಿದ್ದ.