ಮಂಗಳೂರು, ಫೆ.10(DaijiworldNews/TA): ಮಂಗಳಾದೇವಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯ ಚಿಕಿತ್ಸಾಲಯ, ನಗರ ಪಾಲಿಕೆ ಸಿಬ್ಬಂದಿ ವಸತಿ ಬಸ್ ಟರ್ಮಿನಲ್ ಹಾಗೂ ಸಾರ್ವಜನಿಕರ ಉದ್ಯಾನವನವನ್ನು ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು ಪಾಲಿಕೆಯ ಸದಸ್ಯ ಪ್ರೇಮಾನಂದ ಶೆಟ್ಟಿ ಅವರ ಕನಸಿನ ಯೋಜನೆ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ವಿಷಯ. ಮೇಯರ್ ಅವಧಿಯಲ್ಲಿ 2022ರಲ್ಲಿ ಪ್ರಸ್ತಾವಿತ ಯೋಜನೆಗಳಿಗೆ ಶಿಲಾನ್ಯಾಸ ನಡೆದಿತ್ತು. ಈ ಯೋಜನೆ ಮೂಲಕ ಸುತ್ತಮುತ್ತಲಿನ ಭಾಗದ ಜನರು, ಯಾತ್ರಾರ್ಥಿಗಳು, ಪ್ರವಾಸಿಗರಿಗೆ ವಿವಿಧ ಸೌಲಭ್ಯ ನೀಡಿದಂತಾಗಿದೆ. ಐದು ವರ್ಷಗಳಿಂದ ಮಂಗಳೂರು ನಗರ ಗಮನಾರ್ಹ ಅಭಿವೃದ್ಧಿ ಕಾಣುತ್ತಿದೆ ಎಂದು ಹೇಳಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಪ್ರೇಮಾನಂದ ಶೆಟ್ಟಿ ಮಾತನಾಡಿದರು. ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್ ಭಾನುಮತಿ ಪಿ.ಎಸ್., ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮನಪಾ ಸದಸ್ಯರಾದ ಶೈಲೇಶ್ ಶೆಟ್ಟಿ, ರೇವತಿ ಶ್ಯಾಂಸುಂದರ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.