ಬಂಟ್ವಾಳ, ಫೆ.10 (DaijiworldNews/AK): ಮಣಿಹಳ್ಳ-ಮಾವಿನಕಟ್ಟೆ ರಸ್ತೆಯ ಮಣಿನಾಲ್ಕೂರು ಗ್ರಾಮದ ಎರ್ಮಳದಲ್ಲಿ ಸ್ಕೂಟರೊಂದಕ್ಕೆ ಎದುರಿನಿಂದ ಆಗಮಿಸಿದ ಕಾರೊಂದು ಢಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಫೆ. 9ರಂದು ನಡೆದಿದೆ.

ಸರಪಾಡಿ ಕಲ್ಕೊಟ್ಟೆ ನಿವಾಸಿ ಸುಂದರ ಬಾಬು ಶೆಟ್ಟಿ ಗಾಯಗೊಂಡವರು. ಅವರು ರಾತ್ರಿ ೯.೫೦ರ ಸುಮಾರಿಗೆ ಪೆರಿಯಪಾದೆ ದೈವಸ್ಥಾನಕ್ಕೆ ಹೋಗಿ ಹರಿಕೆ ಸಲ್ಲಿಸಿ ವಾಪಸ್ಸು ತನ್ನ ಮನೆಗೆ ಸರಪಾಡಿ ಕಡೆಗೆ ತೆರಳುತ್ತಿರುವ ಸಂದರ್ಭ ಕಾರು ಚಾಲಕನಾದ ದಿನಕರ ಎಂಬಾತನು ತನ್ನ ಕಾರನ್ನು ದುಡುಕತನ ಹಾಗೂ ನಿರ್ಲಕ್ಷತನದಿಂದ ಚಾಲಯಿಸಿಕೊಂಡು ರಸ್ತೆಯ ತೀರ ಬಲ ಬದಿಗೆ ಬಂದು ಸುಂದರ ಅವರ ಸ್ಕೂಟರಿಗೆ ಎದುರುಗಡೆಯಿಂದ ಡಿಕ್ಕಿ ಪಡಿಸಿದ ಪರಿಣಾಮ ಅವರು ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ.
ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರು ಚಾಲಕ ದಿನಕರ ಎಂಬಾತನ ದುಡುಕತನ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.