ಬಂಟ್ವಾಳ,ಫೆ.10 (DaijiworldNews/AK): ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಇದೇ ಮೊದಲ ಬಾರಿಗೆ ಗೇಟ್ ಹಾಕಿ ನೀರು ಸಂಗ್ರಹ ಆರಂಭಗೊಂಡಿದೆ.

ಸಣ್ಣ ನೀರಾವರಿ ಇಲಾಖೆಯ ಮೂಲಕ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ 3ನೇ ಬ್ರಿಡ್ಜ್ ಕಂ ಬ್ಯಾರೇಜ್ ಇದಾಗಿದ್ದು, ಮೂರು ವರ್ಷ ಹಿಂದೆ ಹರೇಕಳದಲ್ಲಿ ನೀರು ಸಂಗ್ರಹ ಕಾರ್ಯ ಆರಂಭಗೊಂಡಿತ್ತು. ಬಿಳಿಯೂರಿನಲ್ಲಿ ಕಳೆದ ವರ್ಷ ನೀರು ಸಂಗ್ರಹ ಆರಂಭಗೊಂಡಿದ್ದು, ಈ ವರ್ಷವೂ ಗೇಟ್ ಅಳವಡಿಸಲಾಗಿದೆ.
ಇದೀಗ ಈ ವರ್ಷದಿಂದ ಜಕ್ರಿಬೆಟ್ಟಿನ 3ನೇ ಬ್ರಿಡ್ಜ್ ಕಂ ಬ್ಯಾರೇಜ್ನಲ್ಲೂ ನೀರು ಸಂಗ್ರಹ ಆರಂಭಗೊಂಡಿದೆ. 2022ರ ನವೆಂಬರ್ನಲ್ಲಿ ಅಂದಿನ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶಿಲಾನ್ಯಾಸ ನೆರವೇರಿಸಿ ಕಾಮಗಾರಿ ಆರಂಭಗೊಂಡಿತ್ತು.
ಕಳೆದ ವರ್ಷವೇ ಇದರ ನಿರ್ಮಾಣದ ಕಾಮಗಾರಿ ಪೂರ್ಣಗೊಂಡು ಪ್ರಯೋಗಿಕ ಪರೀಕ್ಷೆ ನಡೆಸಲಾಗಿದ್ದು, ಪ್ರಸ್ತುತ ನದಿ ದಡಕ್ಕೆ ಕಲ್ಲು ಹಾಸುವ ಕೆಲಸ ಪೂರ್ಣಗೊಂಡು ಗೇಟ್ ಹಾಕಿ ನೀರು ನಿಲ್ಲಿಸುವಿಕೆ ಆರಂಭಗೊಂಡಿದೆ.
ಜಕ್ರಿಬೆಟ್ಟು ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ಉದ್ದ 351.25 ಮೀ. ಹಾಗೂ 5.50 ಮೀ. ಎತ್ತರವಿದ್ದು, ಪೂರ್ತಿ ಗೇಟ್ ಅಳವಡಿಸಿದರೆ 166 ಎಂಸಿಎಫ್ಟಿ ನೀರು ಶೇಖರಣೆಗೊಂಡು ಸುಮಾರು 5 ಕಿ.ಮೀ.ವರೆಗೆ ಹಿನ್ನೀರು ವ್ಯಾಪಿಸಲಿದೆ.
ಸೇತುವೆಯ ಅಗಲ 7.50 ಮೀ. ಇದ್ದು, ಒಟ್ಟು 21 ಕಿಂಡಿಗಳಿವೆ. 12 ಮೀ. ಅಗಲದ ವರ್ಟಿಕಲ್ ಲಿಫ್ಟ್ ಗೇಟ್ಗಳಿದ್ದು, ಮಧ್ಯದಲ್ಲಿ ಎರಡು ಸ್ಕರ್ಸ್ ಸ್ಲೂಯಿಸ್ ಗೇಟ್ಗಳಿರುತ್ತವೆ. ತುರ್ತು ಪ್ರವಾಹದ ಸಂದರ್ಭ ನೀರಿನ್ನು ಕೆಳಕ್ಕೆ ಕಳುಹಿಸುವ ಉದ್ದೇಶದಿಂದ ಸ್ಕರ್ಸ್ ಸ್ಲೂಯಿಸ್ ಗೇಟ್ಗಳನ್ನು ಅಳವಡಿಸಲಾಗಿದ್ದು, ಇದು ಲಿಫ್ಟ್ ಗೇಟ್ಗಳಿಗಿಂತ ತೀರಾ ಕೆಳಸ್ತರದಲ್ಲಿರುತ್ತದೆ. ಹೀಗಾಗಿ ತಳ ಭಾಗದಲ್ಲಿ ಮರಳು ಸಂಗ್ರಹಗೊಂಡರೆ ಅದನ್ನು ಹೊರಕ್ಕೆ ಕಳುಹಿಸಲು ಅನುಕೂಲವಾಗುವ ದೃಷ್ಟಿಯಿಂದ ಈ ಗೇಟ್ಗಳನ್ನು ವಿನ್ಯಾಸಗೊಳಿಸಲಾಗಿದೆ.
ಕಳೆದ ವರ್ಷ ತುಂಬೆ ಡ್ಯಾಮ್ನಲ್ಲಿ ನೀರಿನ ಸಂಗ್ರಹ ಕಡಿಮೆಯಾದಾಗ ಶಂಭೂರು ಎಎಂಆರ್ ಡ್ಯಾಮ್ನ ಜತೆಗೆ 2 ಬಾರಿ ಬಿಳಿಯೂರು ಕಿಂಡಿ ಅಣೆಕಟ್ಟಿನಿಂದಲೂ ಗೇಟ್ ತೆರೆದು ಕೆಳಕ್ಕೆ ನೀರು ಹರಿಸಲಾಗಿತ್ತು. ಈ ವರ್ಷ ಎಎಂಆರ್ ಡ್ಯಾಮ್ ಮತ್ತು ತುಂಬೆ ಡ್ಯಾಮ್ನ ಮಧ್ಯೆ ಜಕ್ರಿಬೆಟ್ಟು ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿರುವುದರಿಂದ ಮಳೆ ಎಷ್ಟೇ ವಿಳಂಬವಾದರೂ ಆತಂಕ ಪಡಬೇಕಾಗಿರುವುದಿಲ್ಲ.
ಮಂಗಳೂರು ನಗರದ ಜತೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಇಲ್ಲಿ ಸಂಗ್ರಹಿಸಲ್ಪಟ್ಟ ನೀರು ಸಹಕಾರಿಯಾಗಲಿದ್ದು, ಜತೆಗೆ ನದಿ ಕಿನಾರೆಯ ಕೃಷಿ ತೋಟಗಳಿಗೆ ಅನುಕೂಲವಾಗುವ ಜತೆಗೆ ಸುತ್ತಮುತ್ತಲ ಪ್ರದೇಶದ ಅಂತರ್ಜಲ ವೃದ್ಧಿಗೂ ನೆರವಾಗಲಿದೆ.