ಬೈಂದೂರು, ಫೆ.10 (DaijiworldNews/AK): ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಡ್ಕಲ್ ಸಮೀಪದ ಕಾನ್ಕಿಯ ನಡುರಸ್ತೆಯಲ್ಲಿ ಗೋವಿನ ರುಂಡ ಪತ್ತೆಯಾಗಿದ್ದು ಬೈಂದೂರಿನಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ.

ಗೋವಿನ ರುಂಡ ಪತ್ತೆಯಾದ ಸ್ಥಳಕ್ಕೆ ತಡರಾತ್ರಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ದೌಡಾಯಿಸಿ ಆಕ್ರೋಶ ವ್ಯಕ್ತಪಡಿಸಿದರುಇದೇ ವೇಳೆ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ ಶಾಸಕರು ಗೋ ಹಂತಕರನ್ನು ಶೀಘ್ರವಾಗಿ ಬಂಧಿಸುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಹಿಂದೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಪೊಲೀಸರ ಮೇಲೆ ಒತ್ತಡ ಹೇರಿ ಕ್ರಮ ಕೈಗೊಳ್ಳದಂತೆ ಕಟ್ಟಿ ಹಾಕುವ ಮೂಲಕ ಕಾಂಗ್ರೆಸ್ ಸರ್ಕಾರ ಬೆನ್ನಹಿಂದೆ ನಿಂತು ಗೋ ಹಂತಕರನ್ನು ಪೋಷಿಸುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಅವ್ಯಾಹತ ಗೋ ಕಳ್ಳತನ, ಗೋಹತ್ಯೆಯ ವಿರುದ್ಧ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ್ದರೂ ಮತಾಂಧರನ್ನು ಹೆಡೆಮುರಿ ಕಟ್ಟುವಲ್ಲಿ ಸರ್ಕಾರ ವಿಫಲವಾಗಿದೆ. ಬೈಂದೂರಿನ ನಾನಾ ಭಾಗಗಳಲ್ಲಿ ಗೋ-ಹತ್ಯೆ ನಡೆಸಿ ಗೋವಿನ ಅಂಗಾಂಗಳನ್ನು ಬೀದಿಯಲ್ಲಿ ಎಸೆದು ಶಾಂತಿಭಂಗ ಮಾಡುತ್ತಿದ್ದಾರೆ. ಹಿಂದೂ ಸಮಾಜ ತಿರುಗಿ ಬೀಳುವ ಮುನ್ನ ಗೋ ಹಂತಕರನ್ನು ಬಂಧಿಸಬೇಕು ಎಂದು ಶಾಸಕರು ಆಗ್ರಹಿಸಿದರು.