ಮಂಗಳೂರು: ಫಾ| ಪ್ರಶಾಂತ್ ಮಾಡ್ತಾರಿಗೆ ದಾಯ್ಜಿ ದುಬಾಯ್ ಸಾಹಿತ್ಯ ಪುರಸ್ಕಾರ ಪ್ರದಾನ
Tue, Feb 11 2025 01:31:32 PM
ಮಂಗಳೂರು, ಫೆ.11 (DaijiworldNews/AA): ಖ್ಯಾತ ಕನ್ನಡ ಕೊಂಕಣಿ ಬರಹಗಾರ, ಭಾಶಾ ಸಂಶೋಧಕ ವಂದನೀಯ ಪ್ರಶಾಂತ್ ಮಾಡ್ತರಿಗೆ 2024 ನೇ ಸಾಲಿನ ಪ್ರತಿಷ್ಠಿತ ದಾಯ್ಜಿ ದುಬಾಯ್ ಸಾಹಿತ್ಯ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಮಂಗಳೂರಿನ ಬೆಂದೂರ್ ಸಂತ ಸೆಬಾಸ್ಟಿಯನ್ ಸಭಾಂಗಣದಲ್ಲಿ ನಡೆದ ದಾಯ್ಜಿ ದುಬಾಯ್ ಬೆಳ್ಳಿಹಬ್ಬದ ಆಚರಣೆ ಸಂದರ್ಭದಲ್ಲಿ ಅನಿವಾಸಿ ಉದ್ಯಮಿಗಳಾದ ಮೈಕಲ್ ಡಿ ಸೋಜಾ, ಜೋಸೆಫ್ ಮಥಾಯಸ್ ಹಾಗೂ ಜೆಪ್ಪು ಸೆಮಿನರಿ ರೆಕ್ಟರ್ ಫಾ|ರೊನಾಲ್ಡ್ ಸೆರಾವೊ ಮಾಡ್ತಾರಿಗೆ ಫಲ ಪುಷ್ಪ ಹಾಗೂ ಸ್ಮರಣಿಕೆಯೊಂದಿಗೆ ಶಾಲು ಹೊದಿಸಿ ರೂ 75,000 ಪ್ರಶಸ್ತಿ ಮೊತ್ತವನ್ನು ಹಸ್ತಾಂತರಿಸಿ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಮಾಡ್ತಾ "ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುವ ನಮ್ಮ ಕರಾವಳಿಗರು ಇಲ್ಲಿನ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಅವರ ಪ್ರತಿಯೊಂದು ಬೆವರ ಹನಿಗಳು ಇಲ್ಲಿ ಗುಲಾಬಿ ಹೂವುಗಳಾಗಿ ಅರಳಿವೆ. ಯುಎಇಯಲ್ಲಿ ವಾಸವಾಗಿರುವ ಕರಾವಳಿಯ ಕೊಂಕಣಿ ಬರಹಗಾರರ ಸಂಘಟನೆ ದಾಯ್ಜಿ ದುಬಾಯ್ ತಾಯ್ನಾಡಿನಲ್ಲಿ ಕೊಂಕಣಿ ಸಾಹಿತ್ಯ ಹಾಗೂ ಸಾಹಿತಿಗಳಿಗೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಅವರು ಕೊಡಮಾಡುವ ಪ್ರಶಸ್ತಿಯ ಮೂಲಕ ಅವರು ನನ್ನನ್ನೂ ಗುಲಾಬಿಯಂತೆ ಅರಳುವಂತೆ ಮಾಡಿದ್ದಾರೆ. ಅವರ ಪ್ರೋತ್ಸಾಹಕ್ಕೆ, ಅಭಿಮಾನಕ್ಕೆ ಹಾಗೂ ಗೌರವಕ್ಕೆ ತಲೆಬಾಗುತ್ತೇನೆ" ಎಂದು ನುಡಿದರು.
ವಾಲ್ಟರ್ ನಂದಳಿಕೆ ದಾಯ್ಜಿ ದುಬಾಯ್ ಸಂಘಟನೆಯ ಸ್ಥಾಪನಾ ದಿನಗಳನ್ನು ಮೆಲುಕು ಹಾಕುತ್ತಾ ಇಪ್ಪತೈದು ಸಂವತ್ಸರಗಳ ಸೇವೆಯ ಸಾರ್ಥಕತೆಯನ್ನು ವ್ಯಕ್ತಪಡಿಸಿದರು. ಸಂಚಾಲಕ ಹಾಗೂ ಸಂಸ್ಥಾಪಕರಾದ ಡಯಾನ್ ಡಿ ಸೋಜಾ ಧನ್ಯವಾದ ಸಮರ್ಪಿಸಿದರು. ಸಂಘಟನೆಯ ಇತರ ಸಂಸ್ಥಾಪಕರಾದ, ವಾಲ್ಟರ್ ನಂದಳಿಕೆ, ಮೆಲ್ವಿನ್ ರೊಡ್ರಿಗಸ್, ಸ್ಟೀಫನ್ ಮಸ್ಕರೇನ್ಹಸ್, ಸಂಘಟನೆಯ ಮಂಗಳೂರು ಘಟಕ ಅಧ್ಯಕ್ಷ ಪ್ರವೀಣ್ ತಾವ್ರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಖ್ಯಾತ ಕೊಂಕಣಿ ನಾಟಕಕಾರ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಸಂಘಟನೆಯ ಸಂಸ್ಥಾಪಕರನ್ನು ಸನ್ಮಾನಿಸಿದರು.