ಬೆಂಗಳೂರು ಡಿ 3 : ಪೌರ್ಣಮಿಯ ದಿನವಾದ ಇಂದು ಈ ವರ್ಷದ ಕಡೆಯ ಸೂಪರ್ ಮೂನ್ ದರ್ಶನವಾಗಲಿದೆ. ಹೀಗಾಗಿ ಚಂದ್ರ ಇನ್ನಷ್ಟು ಹತ್ತಿರ ಹಾಗೂ ಹೆಚ್ಚು ಪ್ರಭೆಯೊಂದಿಗೆ ಗೋಚರಿಸಲಿದ್ದಾನೆ. ಮಾಹಿತಿ ಪ್ರಕಾರ 14 ಪಟ್ಟು ದೊಡ್ಡದಾಗಿಯೂ, 30 ಪಟ್ಟು ಗಾಢ, ಕಾಂತಿಯುತವಾಗಿಯೂ ಕಾಣಲಿದ್ದಾನೆ. ಎಲ್ಲಾ ಹುಣ್ಣಿಮೆಯಂದು ಚಂದಿರ ಒಂದೇ ಗಾತ್ರದಲ್ಲಿ ಗೋಚರಿಸುವುದಿಲ್ಲ. ಕೆಲವೊಮ್ಮೆ ಆತನ ಪ್ರಭೆ ಅತ್ಯಂತ ಕಡಿಮೆ ಅಥವಾ ಹೆಚ್ಚು ಇರುತ್ತದೆ. ದೊಡ್ಡದಾಗಿ ಕಂಡಾಗ ಭವ್ಯ ಬೆಳದಿಂಗಳು ಹರಡಿರುತ್ತದೆ. ಇನ್ನು ಈ ವರ್ಷದ ಕಡೆಯ ಸೂಪರ್ ಮೂನ್ ಇದಾಗಿದ್ದು, ಸದ್ಯ ಓಖಿ ಚಂಡಮಾರುತದ ಪ್ರಭಾವ ಹೆಚ್ಚಿರುವ ಸಂದರ್ಭದಲ್ಲಿ ಸಮುದ್ರದ ಅಲೆಗಳು ದೊಡ್ಡ ಪ್ರಮಾಣದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ. ಕಡಲ ತೀರಕ್ಕೆ ತೆರಳುವವರು, ಮೀನುಗಾರರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.