ಕಾರ್ಕಳ, ಫೆ.13 (DaijiworldNews/AK):ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಒಳಚರಂಡಿಯ ತ್ಯಾಜ್ಯ ನೀರು ಉದ್ಯಾವರ ಹೊಳೆಯಲ್ಲಿ ಲೀನವಾಗುತ್ತಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.1994ರಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದ ಡಾ. ವೀರಪ್ಪ ಮೊಯಿಲಿ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ಯೋಜನೆಯನ್ನು ಅನುಷ್ಠಾನಗೊಳಿಸಿದ್ದರು. ಅವುಗಳಲ್ಲಿ ಒಳಚರಂಡಿ ಯೋಜನೆಯೂ ಒಂದಾಗಿದೆ.

ಅಂದು ರೂ.50ಲಕ್ಷ ವೆಚ್ಚದಲ್ಲಿ ಒಳಚರಂಡಿ ಯೋಜನೆ ಕಾರ್ಕಳ ಪುರಸಭಾ ವ್ಯಾಪ್ತಿಯ ೩ ಕಿ.ಮೀ ವ್ಯಾಪ್ತಿಯಲ್ಲಿ ಹಾದು ಹೋಗಿತ್ತು.ಜನಸಂಖ್ಯೆಗೆ ಹೆಚ್ಚುತ್ತಿದ್ದಂತೆ ಹಳೆಯದಾದ ಯೋಜನೆಯಲ್ಲಿ ಉಂಟಾದ ಕೆಲ ಸಮಸ್ಸೆಗಳಿಂದಾಗಿ ಮತ್ತೇ ಕಾರ್ಕಳಕ್ಕೆ ಒಳಚರಡಿ ಯೋಜನೆಯ ಭಾಗ್ಯ ದೊರೆತ್ತಿರುವುದು 2020ರ ಅವಧಿಯಲ್ಲಿ. 1994ರಲ್ಲಿ ಹಾದೂ ಹೋಗಿದ್ದ ಒಳಚರಂಡಿ ಲೈನ್ನ ಹಳೆ ಪೈಪ್ ಹೊರತೆಗೆದು ಅದೇ ಹಾದಿಯಲ್ಲಿ ಹೊಸ ಪೈಪ್ ಲೈನ್ ಅಳವಡಿಸುವ ಕಾರ್ಯ ಅದಾಗಿದ್ದು, ೩ ಕಿ.ಮೀ ವರೆಗೆ ಒಳಚರಂಡಿ ಯೋಜನೆಗೆ ರೂ.೧೩ ಕೋಟಿ ಅನುದಾನ ವಿನಿಯೋಗಿಸಲಾಗಿದೆ.
ಕಾಮಗಾರಿಯ ವೇಳೆಗೆ ಹಲವು ನ್ಯೂನತೆಗಳು ಕಂಡುಬಂದಿದ್ದು, ಅದರಲ್ಲೂ ಪ್ರಮುಖವಾಗಿ ಕಾರ್ಕಳದ ರಥಬೀದಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಒಳಚರಂಡಿಯಿಂದ ತ್ಯಾಜ್ಯ ನೀರು ಉಕ್ಕಿ ಹೊರಬರುತ್ತಿತ್ತು. ಇದು ಭಾರೀ ವಿವಾದಕ್ಕೂ ಕಾರಣವಾಗಿತ್ತು. ಪಕ್ಷಾತೀತ ನೆಲೆಯಲ್ಲಿ ನಾಗರಿಕರು ಈ ಕಾಮಗಾರಿಯ ಕುರಿತು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.
ಒಂದೆಡೆಯಲ್ಲಿ ಕರೋನಾ ಮತ್ತೊಂದೆಡೆಯಲ್ಲಿ ಒಳಚರಂಡಿ ಕಾಮಗಾರಿ:
ಒಂದೆಡೆಯಲ್ಲಿ ಕರೋನಾದ ಭೀತಿಯಿಂದಾಗಿ ಜನಜೀವನದ ಮೇಲೆ ಕರಿಛಾಯೆ ಮೂಡಿತ್ತು. ಆ ಸಂದರ್ಭದಲ್ಲಿ ಒಳಚರಂಡಿ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಕರೋನಾದ ಕರಿಛಾಯೆ ಕ್ಷೀಣಿಸುತ್ತಿದ್ದಂತೆ ಕಾರ್ಕಳದಲ್ಲಿ ಒಳಚರಂಡಿ ಕಾಮಗಾರಿಯೂ ಶುರುವಾಗಿತ್ತು.ವಾಹನ ಓಡಾಟಕ್ಕೆ ಹಾಗೂ ಕಾಮಗಾರಿಯ ಧೂಳಿನಿಂದ ನಾಗರಿಕರು ಒಂದಿಷ್ಟು ಸಂಕಷ್ಟ ಎದುರಿಸಿದ್ದರು.
ಸಮಸ್ಸೆ ಮುಕ್ತಿಗಾಗಿ ಜಾರಿಗೆ ತಂದ ಯೋಜನೆಯಿಂದ ಇನ್ನಷ್ಟು ಸಮಸ್ಸೆ!
1994ರಲ್ಲಿ ಮೊಟ್ಟಮೊದಲ ಬಾರಿಗೆ ಕಾರ್ಕಳ ವ್ಯಾಪ್ತಿಯಲ್ಲಿ ಜಾರಿ ತಂದ ಯೋಜನೆಯಾಗಿರುವ ಒಳಚರಂಡಿಯ ತ್ಯಾಜ್ಯ ಸಂಸ್ಕರಣ ಘಟಕವು ಕಾಬೆಟ್ಟು ವ್ಯಾಪ್ತಿಯ ಕಟ್ಟೆಮಾರು ಪ್ರದೇಶದಲ್ಲಿ 2.73ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು.ನಂತರದ ವರ್ಷಗಳಲ್ಲಿ ನಿರ್ವಹಣೆಯ ಕೊರತೆಯಿಂದ ಇಡೀ ಪ್ರದೇಶ ವ್ಯಾಪ್ತಿಯಲ್ಲಿ ತ್ಯಾಜ್ಯ ನೀರು ಶೇಖರಣೆ ಗೊಂಡ ಪರಿಣಾಮವಾಗಿ ಫಲವತ್ತಾದ ಕೃಷಿ ಭೂಮಿ, ಕುಡಿಯುವ ನೀರಿನ ಬಾವಿಗಳೆಲ್ಲವೂ ಕಲುಷಿತಗೊಂಡಿತ್ತು. ಕಾಬೆಟ್ಟು ಆಸುಪಾಸಿನಲ್ಲಿ ದುರ್ನಾತ ಬೀರುತ್ತಾ ಸೊಳ್ಳೆ ಸಹಿತ ಸಾಂಕ್ರಾಮಿಕ ರೋಗಾಣುಗಳ ಅವಾಸ ತಾಣವಾಗಿ ಮಾರ್ಪಟ್ಟಿತ್ತು.ಈ ಕುರಿತು ಹಲವು ಬಾರಿ ನಾಗರಿಕರು ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೂ ಮನವಿ ಪತ್ರ ಸಲ್ಲಿಸಿದ್ದರು. ಇವೆಲ್ಲ ಸಮಸ್ಸೆಗಳಿಗೆ ಮುಕ್ತಿ ದೊರೆಯಿತ್ತೆಂದು ಭಾಸವಾಗುತ್ತಿದ್ದಂತೆ ಇದೀಗ ಅದೇ ಯೋಜನೆಯಿಂದ ಇನ್ನಷ್ಟು ಸಮಸ್ಸೆ ಎದುರಾಗಿದೆ.
ಕಾಬೆಟ್ಟು ಕಟ್ಟೆಮಾರಿನಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಿಸಲಾಗಿದೆ. ಅದರ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಅದಕ್ಕೆ ಇಂಬು ನೀಡಿರುವಂತೆ ಸ್ಥಳೀಯ ನಾಗರಿಕರು ಅಗತ್ಯ ವಿಡಿಯೋಗಳನ್ನು ಬಿಡುಗಡೆಗೊಳಿಸಿದ್ದಾರೆ. ವಿಡಿಯೋದಲ್ಲಿ ಕಂಡು ಬಂದಿರುವ ದೃಶ್ಯಾವಳಿ ಗಮನಿಸಿದರೆ ತ್ಯಾಜ್ಯ ಸಂಸ್ಕರಣ ಘಟಕದಿಂದ ಕೊಳಚೆ ನೀರು ನೇರವಾಗಿ ಪಕ್ಕದ ತೋಡಿಗೆ ಹರಿಯಬಿಡಲಾಗಿದೆ.
ಅದು ಕೇವಲ ತೋಡಲ್ಲ!
ಕಾಬೆಟ್ಟು ಕಟ್ಟೆಮಾರು ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ತ್ಯಾಜ್ಯ ಸಂಸ್ಕರಣ ಘಟಕದ ಪಕ್ಕದಲ್ಲಿರುವ ತೋಡು ಉದ್ಯಾವರ ನದಿಯ ಕೊಂಡಿ ಎಂದರೂ ತಪ್ಪಾಗಲಾರದು.ಕಾರ್ಕಳ ನಗರದ ಐತಿಹಾಸಿಕ ಹಿನ್ನಲೆಯುಳ್ಳ ಆನೆಕೆರೆ ಉದ್ಯಾವರ ನದಿ ಮೂಲವಾಗಿದೆ. ಇಲ್ಲಿಂದ ಹೊರ ಹರಿಯುವ ನೀರು ಕಾಬೆಟ್ಟು, ಪರಪ್ಪು ಮೂಲಕವಾಗಿ ಉದ್ಯಾವರ ಸೇರುತ್ತದೆ. ಉದ್ಯಾವರ ನದಿ ಎಂದು ಕರೆಯಲ್ಪಡುತ್ತಾರೆ. ಉದ್ಯಾವರ ನದಿಯ ಅಂತರ್ಜಲದಿಂದ ಹಲವು ಬಾವಿಗಳಲ್ಲಿ ನೀರು ಹೆಚ್ಳಳಕ್ಕೆ ಕಾರಣವಾಗಿದೆ. ದೈನಂದಿನ ಜೀವನಕ್ಕೆ ಹಾಗೂ ಕೃಷಿ ಕಾಯಕಗಳಿಗೆ ಅದೇ ನೀರನ್ನು ನಾಗರಿಕರು ಬಳಸುತ್ತಿದ್ದಾರೆ.