ಉಡುಪಿ, ಫೆ.13(DaijiworldNews/TA): ಕಿನ್ನಿಮೂಲ್ಕಿ ವೇಗಾಸ್ ಟೌನ್'ಶಿಪ್'ನಲ್ಲಿರುವ ನೇತ್ರ ಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಸಹಸಂಸ್ಥೆ ನೇತ್ರಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ನೇತ್ರಜ್ಯೋತಿ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಘಟಿಕೋತ್ಸವ ಹಾಗೂ ನೂತನ ಸ್ನಾತಕೋತ್ತರ ಪದವಿ ಸೆಂಟರ್ ಉದ್ಘಾಟನೆಗೊಂಡಿತು.

ಉದ್ಘಾಟಿಸಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಪ್ಯಾರಾಮೆಡಿಕಲ್ ಕ್ಷೇತ್ರದಲ್ಲಿ ವೃತ್ತಿಪರರ ಕೊರತೆ ಇದ್ದು, ದೇಶದಾದ್ಯಂತ ವಿಫುಲ ಅವಕಾಶಗಳಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ಯಾರಾಮೆಡಿಕಲ್ ಸಿಬ್ಬಂದಿಗಳು ವೈದ್ಯರಿಗೆ ಸಹಾಯಕರಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರವನ್ನು ಆಯ್ದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ .ಗೋವಾದಲ್ಲೂ ವೈದ್ಯಕೀಯ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಸಾದ್ ನೇತ್ರಾಲಯವು ಉತ್ತಮ ಜನಸೇವೆ ಮಾಡಿದೆ ಎಂದರು. ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ ಜೀವನದಲ್ಲಿ ಶತ್ರು ಮತ್ತು ಪ್ರತಿಸ್ಪರ್ಧಿ ಇರಬೇಕು. ಹಾಗಿದ್ದರೇ ಮಾತ್ರ ಬದುಕಿನಲ್ಲಿ ಸಾಧನೆ ಮಾಡಿ ಯಶ್ವಸಿ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಲೇಜಿನ ಟ್ರಸ್ಟಿಗಳಾದ ಕೆ.ರಘುರಾಮ್ ರಾವ್, ರಶ್ಮಿ ಕೃಷ್ಣಪ್ರಸಾದ್, ಕಾಲೇಜಿನ ಸಿಓಓ ಡಾ.ಗೌರಿಪ್ರಭು ಉಪಸ್ಥಿತರಿದ್ದರು. ಘಟಿಕೋತ್ಸವದಲ್ಲಿ ಪ್ರಮೋದ್ ಸಾವಂತ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ದಿ.ವೀಣಾ ರಘುರಾಮ್ ರಾವ್ ದತ್ತಿ ಪ್ರಶಸ್ತಿಯನ್ನು ಸಾಧಕ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು.