ಕಡಬ, ಫೆ.14(DaijiworldNews/TA): ಇತ್ತೀಚೆಗೆ ಕಡಬ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತರ ಓಡಾಟ ಹೆಚ್ಚಾಗಿದೆ. ಅದೂ ಅಲ್ಲದೆ ಅಲ್ಲಲ್ಲಿ ಕಳ್ಳತನ, ವಂಚನೆ ದೂರುಗಳು ಕೂಡ ಕೇಳಿಬರುತ್ತಿವೆ. ಇದೀಗ ಕಾಡು ಹಂದಿಯ ಮಾಂಸ ನೀಡುವುದಾಗಿ ಹಲವರಿಂದ ಹಣ ಪಡೆದ ಅಪರಿಚಿತ ವ್ಯಕ್ತಿಯೊಬ್ಬ ಸ್ಥಳೀಯ ವ್ಯಕ್ತಿಯೊಬ್ಬರನ್ನು ಬೈಕ್ ನಲ್ಲಿ ಕರೆದೊಯ್ದು ಅರ್ಧ ದಾರಿಯಲ್ಲೇ ಬಿಟ್ಟು ಹೋಗಿ ವಂಚಿಸಿದ ಘಟನೆ ಎಡಮಂಗಲದಲ್ಲಿ ನಡೆದಿದೆ.

ಗ್ರಾಮದ ನಿವಾಸಿಗಳಿಗೆ ವಂಚಿಸಿದ ವ್ಯಕ್ತಿಯು ತನ್ನ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಎಡಮಂಗಲದ ಹಿರಿಯ ವ್ಯಕ್ತಿಯೊಬ್ಬರು ಮಹಾಕಾಳಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬೈಕ್ ನಲ್ಲಿ ಬಂದ ವ್ಯಕ್ತಿ "ಹಂದಿ ಮಾಂಸ ಇದೆ, ಬೇಕಾದರೆ ಕೊಡುತ್ತೇನೆ" ಎಂದು ನಂಬಿಸಿದ್ದ . ಹೀಗಾಗಿ ಆತನ ಬೈಕ್ ನಲ್ಲಿ ಹೋಗಿ ಎಂ.ಎಸ್.ಎಲ್ ಶಾಪ್ ಬಳಿಯ ಇತರ ವ್ಯಕ್ತಿಗಳು ಮಾಂಸ ಬೇಕು ಹೇಳಿದಾಗ ಅವರಿಂದಲೂ ಹಣ ಸಂಗ್ರಹಿಸಿ ಆತನಿಗೆ ನೀಡಿದ್ದರು. ಆ ಬಳಿಕ ಎಡಮಂಗಲ- ಕಡಬ ಸಂಪರ್ಕಿಸುವ ಪಲೋಲಿ ಸೇತುವೆ ದಾಟಿ ಮುಂದಕ್ಕೆ ಆ ಹಿರಿಯ ವ್ಯಕ್ತಿಯನ್ನು ಬೈಕ್ ನಿಂದ ಇಳಿಸಿ ಕ್ಷಣಮಾತ್ರದಲ್ಲಿ ಹಂದಿ ಮಾಂಸ ತರುವುದಾಗಿ ಹೇಳಿ ಹೋದಾತ ಬರಲೇ ಇಲ್ಲ.
ಇತ್ತ ಎಡಮಂಗಲದಲ್ಲಿ ಮಾಂಸಕ್ಕಾಗಿ ಕಾಯುತ್ತಿದ್ದವರು ಹಿರಿಯ ವ್ಯಕ್ತಿಯನ್ನು ತಡವಾಗಿ ವಿಚಾರಿಸಿದಾದ ಮೋಸ ಹೋಗಿರುವುದು ಗೊತ್ತಾಗಿದೆ. ಈ ಅಪರಿಚಿತ ವ್ಯಕ್ತಿ ಆಲಂಕಾರು ,ಮರ್ದಾಳ ಪರಿಸರದಲ್ಲೂ ವಂಚಿಸಿರುವ ಸುದ್ದಿಗಳು ಬಂದಿದೆ. ಹಣ ಪಡೆದು ಮೋಸ ಮಾಡಿದಾತನನ್ನು ಗ್ರಾಮದ ಕೆಲವರು ಆತನ ಚಹರೆ ಪತ್ತೆ ಹಚ್ಚಲು ಮುಂದಾಗಿದ್ದು ಇದರ ಭಾಗವಾಗಿ ಸಿಸಿ ಟಿವಿ ದೃಶ್ಯ ಸಂಗ್ರಹಿಸಿದ್ದಾರೆ. ಪೊಲೀಸರು ಪೇಟೆಯಲ್ಲಿರುವ ಸಿಸಿಟಿವಿ ನೋಡಿದರೆ ಆತನ ಸುಳಿವು ಸಿಗಬಹುದೆಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.