ಮಂಗಳೂರು, ಫೆ.14 (DaijiworldNews/AA): ನಗರದ ಕಲಶಪ್ರಾಯವಾಗಬೇಕಿದ್ದ ಐತಿಹಾಸಿಕ ಕ್ಲಾಕ್ ಟವರ್ ನಿರ್ವಹಣೆ ಇಲ್ಲದೆ ದುರಸ್ತಿ ಹಂತ ತಲುಪಿದ್ದು, ಡೆಂಗ್ಯೂ ಮತ್ತು ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.







ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕ್ಲಾಕ್ ಟವರ್ ಅನ್ನು ಇನ್ನೂ ಅಧಿಕೃತವಾಗಿ ಉದ್ಘಾಟಿಸಲಾಗಿಲ್ಲ. ಇದರೊಂದಿಗೆ, ಕಳಪೆ ನಿರ್ವಹಣೆಯಿಂದಾಗಿ ಕಾರಂಜಿ ನಿಷ್ಕ್ರಿಯಗೊಂಡಿದೆ. ಕ್ಲಾಕ್ ಟವರ್ ಸುತ್ತಮುತ್ತಲಿನ ಪ್ರದೇಶವು ಈಗ ತ್ಯಾಜ್ಯದಿಂದ ತುಂಬಿ ಹೋಗಿದ್ದು, ಅಲೆಮಾರಿಗಳ ವಿಶ್ರಾಂತಿ ತಾಣವಾಗಿ ಮಾರ್ಪಟ್ಟಿದೆ.
ಕ್ಲಾಕ್ ಟವರ್ ಕಾರಂಜಿಯಲ್ಲಿ ಕೊಳಚೆ ನೀರು ತುಂಬಿದ್ದು, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇತರ ಕಸಗಳು ನೀರಿನ ಮೇಲ್ಮೈಯಲ್ಲಿ ತೇಲುತ್ತಿವೆ. ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಕಾರಂಜಿಯ ನಿರ್ಮಾಣಕ್ಕೆ ಕೋಟಿ ರೂ. ಹೂಡಿಕೆ ಮಾಡಿದ್ದರೂ, ನಗರದ ಖ್ಯಾತಿಗೆ ಕಪ್ಪು ಚುಕ್ಕೆಯಾಗಿದೆ.
ಕಳೆದ ಮೂರು ವರ್ಷಗಳಿಂದ, ಕ್ಲಾಕ್ ಟವರ್ ಪೈಪ್ಗಳು ಆಗಾಗ್ಗೆ ಸೋರಿಕೆಯಾಗುತ್ತಿವೆ. ಹೀಗಾಗಿ ನೀರಿನ ಸರಬರಾಜನ್ನು ಸ್ಥಗಿತಗೊಳಿಸಿ ರಿಪೇರಿ ಮಾಡಿ ಬಳಿಕ ಕಾರಂಜಿ ಕೆಲಸ ನಿರ್ವಹಿಸುತ್ತಿತ್ತು. ಆದರೆ ಈಗ ಮೋಟಾರ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ಹೀಗಿದ್ದರೂ, ಕಾರಂಜಿಗೆ ನೀರು ಸರಬರಾಜು ಮಾಡಲಾಗಿದ್ದು, ನಿಂತಿರುವ ನೀರು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಬದಲಾಗಿದೆ.
ಈ ಸಮಸ್ಯೆ ಕಳೆದ ಹಲವು ಸಮಯದಿಂದ ಇದ್ದರೂ ಪಾಲಿಕೆಯಾಗಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳಾಗಲಿ ಕ್ಲಾಕ್ ಟವರ್ ನಿರ್ವಹಣೆ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಂತೆ ಕಂಡು ಬರುತ್ತಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ಮೇಯರ್ ಮನೋಜ ಕುಮಾರ್ ಕೋಡಿಕಲ್, 'ಕ್ಲಾಕ್ ಟವರ್ ನಿರ್ವಹಣೆ ನನೆಗುದಿಗೆ ಬಿದ್ದಿರುವ ಬಗ್ಗೆ ಗಮನಕ್ಕೆ ಬಂದಿದೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಶೀಘ್ರದಲ್ಲಿ ಸ್ವಚ್ಛಗೊಳಿಸಲು ತಿಳಿಸಿದ್ದೇನೆ' ಎಂದರು.