ಕಾಸರಗೋಡು, ಡಿ 04: ಓಖಿ ಚಂಡಮಾರುತದ ಪರಿಣಾಮ ಅಲೆಗಳ ಅಬ್ಬರಕ್ಕೆ ಸಿಲುಕಿ ಬೋಟ್ ಮಗುಚಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಆದಿತ್ಯವಾರ ರಾತ್ರಿ ಪತ್ತೆಯಾಗಿದೆ. ನೀಲೇಶ್ವರ ಹೊಸ ಹಿತ್ಲು ವಿನ ಸುನಿಲ್ ಕುಮಾರ್ ( 45) ಮೃತಪಟ್ಟವರು.ಶುಕ್ರವಾರ ಮುಂಜಾನೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಅನಾಹುತ ನಡೆದಿತ್ತು. ಇಬ್ಬರನ್ನು ಕರಾವಳಿ ರಕ್ಷಣಾ ಪಡೆ ಸಿಬಂದಿಗಳು ರಕ್ಷಿಸಿದರೂ ಸುನಿಲ್ ಕುಮಾರ್ ನಾಪತ್ತೆಯಾಗಿದ್ದರು.ಕಳೆದ ಎರಡು ದಿನಗಳಿಂದ ಜಿಲ್ಲಾಧಿಕಾರಿ ಕೆ . ಜೀವನ್ ಬಾಬು ರವರ ಮೇಲ್ನೋಟದಲ್ಲಿ ಕರಾವಳಿ ರಕ್ಷಣಾ ಪಡೆ, ಅಗ್ನಿಶಾಮಕ ದಳದ ಸಿಬಂದಿಗಳು , ಮೀನುಗಾರರು ಶೋಧ ನಡೆಸಿದ್ದರು. ಭಾನುವಾರ ರಾತ್ರಿ ಅಜನೂರು ತೀರದಿಂದ ಮೂರು ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಮೃತದೇಹ ಪತ್ತೆಯಾಗಿದೆ. ದುರಂತದಿಂದ ಗಾಯಗೊಂಡ ಗಿರೀಶ್ ಮತ್ತು ಸುರೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.