ಮಂಗಳೂರು, ಫೆ.15(DaijiworldNews/TA): ಖ್ಯಾತ ಕೊಂಕಣಿ ಗಾಯಕಿ ಹೆಲೆನ್ ಡಿ ಕ್ರೂಜ್ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಹೆಲೆನ್ ಕೇವಲ ಗಾಯಕಿ ಮಾತ್ರವಲ್ಲ, ಬರಹಗಾರ್ತಿ, ಕಥೆಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆಯೂ ಆಗಿದ್ದರು.

ಹೆಲೆನ್ ಡಿ ಕ್ರೂಜ್ ಅವರ ಗಾಯನ ವೃತ್ತಿಜೀವನವು ಆಫ್ರಿಕಾದಲ್ಲಿ ಪ್ರಾರಂಭವಾಯಿತು, ಅಲ್ಲಿ ಅವರ ತಂದೆ ವೈದ್ಯರಾಗಿದ್ದರಿಂದ ಅವರ ಕುಟುಂಬ ಅಲ್ಲಿಯೇ ವಾಸವಾಗಿತ್ತು. ಅವರ ತಂದೆ ವಯಲಿನಿಸ್ಟ್ , ಹಾಗು ಆಕೆಯ ಮೂವರು ಸಹೋದರರು ಸಂಗೀತ ಹಿನ್ನೆಲೆಯುಳ್ಳವರಾಗಿದ್ದರು.
ಹೆಲೆನ್ ಅವರ ತಂದೆಯ ಅಕಾಲಿಕ ನಿಧನದ ನಂತರ, ಅವರ ಕುಟುಂಬವು ಭಾರತಕ್ಕೆ ಮರಳಿತು ಮತ್ತು ನಂತರ ಮುಂಬೈನಲ್ಲಿ ನೆಲೆಸಿತು. ಹೆಲೆನ್ ಪತ್ರಿಕೋದ್ಯಮವನ್ನು ಅಭ್ಯಸಿಸುತ್ತಾ ಉದ್ಯೋಗದಲ್ಲಿ ತೊಡಗಿಕೊಂಡರು. ಪ್ರಮುಖ ಮಹಿಳಾ ನಿಯತಕಾಲಿಕೆಯಾದ ಈವ್ಸ್ ವಾರಪತ್ರಿಕೆಯಲ್ಲಿ ವೃತ್ತಿ ಮಾಡಿದ ಅನುಭವ ಕೂಡ ಅವರದ್ದು. ಅವರು ಚಲನಚಿತ್ರದ ಚಿತ್ರಕಥೆಗಳನ್ನು ಸಹ ಬರೆದವರು ಮತ್ತು ದಿ ಮಿರರ್ ನಿಯತಕಾಲಿಕವು ಅವರ ಸಣ್ಣ ಕಥೆಗಳನ್ನು ಪ್ರಕಟಿಸಿತ್ತು. ಹಾಗು ಅವುಗಳಲ್ಲಿ 'ವೇರ್ ಈಸ್ ಶಾರೋನ್' ಕೃತಿಯು ಓದುಗರ ಮೆಚ್ಚುಗೆಗೆ ಪಾತ್ರವಾಗಿತ್ತು.
1962 ರಲ್ಲಿ ಹೆಲೆನ್, ವೆನೆಂಟಿಯಸ್ ಡಿ 'ಕ್ರೂಜ್ ಅವರನ್ನು ಭೇಟಿಯಾದರು, ನಂತರ ಅವರು ಡಿಸೆಂಬರ್ 1964 ರಲ್ಲಿ ಬಾಂಬೆಯಲ್ಲಿ ನಡೆದ ಅಂತರರಾಷ್ಟ್ರೀಯ ಎವ್ಕರಿಸ್ಟಿಕ್ ಕಾಂಗ್ರೆಸ್ ಸಮಾವೇಷದ ಸಂದರ್ಭದಲ್ಲಿ ವಿವಾಹವಾದರು. ಅಂದು ಓರ್ವ ಕಾರ್ಡಿನಲ್ನಿಂದ ಆಶೀರ್ವದಿಸಲ್ಪಟ್ಟ 26 ದಂಪತಿಗಳಲ್ಲಿ ಅವರು ಕೂಡ ಸೇರಿದ್ದರು.
ಹೆಲೆನ್ ಬಾಂಬೆಯಲ್ಲಿ ತನ್ನ ಗಾಯನ ಕೌಶಲ್ಯವನ್ನು ಓರೆಹಚ್ಚಿದರು. ಆಗಾಗ್ಗೆ ಕುಟುಂಬ ಕೂಟಗಳಲ್ಲಿ ಪ್ರದರ್ಶನ ನೀಡುತ್ತಿದ್ದ ಅವರು ಸುಮಧುರವಾದ ಧ್ವನಿಗೆ ಹೆಸರುವಾಸಿಯಾಗಿದ್ದರು.
ಆಲ್ ಇಂಡಿಯಾ ರೇಡಿಯೊದಿಂದ ಆಡಿಷನ್ ಪಡೆದ ಮೊದಲ ಮಂಗಳೂರಿನ ಕೊಂಕಣಿ ಗಾಯಕಿ ಮತ್ತು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ಹೆಗ್ಗಲಿಕೆ ಅವರದ್ದು. ಹೆಲೆನ್ರವರ ಯಶಸ್ಸು ಆಲ್ಫೊನ್ಸೊ ಡಿ 'ಕೋಸ್ಟಾ, ಜೆರೋಮ್ ಡಿ' ಸೋಜಾ, ಹೆನ್ರಿ ಡಿ 'ಸೋಜಾ ಮತ್ತು ಹೆನ್ರಿ ಮೊರೇಸ್ ಸೇರಿದಂತೆ ಹಲವಾರು ಪುರುಷ ಕೊಂಕಣಿ ಗಾಯಕರನ್ನು ಪ್ರೋತ್ಸಾಹಿಸಿತು.
1971ರ ಸುಮಾರಿಗೆ, ಹೆಲೆನ್ ತನ್ನ ಮೊದಲ ಯುಗಳ ಗೀತೆಯಾದ ಯೇ ಯೇ ಕತ್ರಿನಾವನ್ನು ರೆಕಾರ್ಡ್ ಮಾಡಿದರು. ಅದು ವಿಶ್ವಾದ್ಯಂತ ಅಪಾರ ಜನಪ್ರಿಯವಾಯಿತು. ಸಾರ್ವಜನಿಕ ಬೇಡಿಕೆಯಿಂದಾಗಿ, ಆಕಾಶವಾಣಿಯು ನಾಲ್ಕು ವರ್ಷಗಳ ಕಾಲ ಪ್ರತಿದಿನ ಹಾಡನ್ನು ಪ್ರಸರಿಸಿತು. ಇದು ಅವರ ಅಭೂತಪೂರ್ವ ಸಾಧನೆಯಾಗಿದೆ.
ಅದೇ ಸಮಯದಲ್ಲಿ ಹೆಲೆನ್ ತನ್ನ ಮೊದಲ ಹಿಸ್ ಮಾಸ್ಟರ್ಸ್ ವಾಯ್ಸ್ (ಎಚ್ಎಂವಿ) ಎಲ್ಪಿ ರೆಕಾರ್ಡ್ ಅನ್ನು ಬಿಡುಗಡೆ ಮಾಡಿದರು. ಇದು ಜನಪ್ರಿಯತೆಯನ್ನು ಗಳಿಸಿತು. ನಂತರ, ಅವರು ಕೊಂಕಣಿ ಧ್ವನಿಮುದ್ರಿಕೆಯಲ್ಲಿ ಪ್ರಸಿದ್ಧ ಬಾಲಿವುಡ್ ಗಾಯಕ ಹೇಮಂತ್ ಕುಮಾರ್ ಅವರೊಂದಿಗೂ ಹಾಡಿದರು. ಕೊಂಕಣಿಯಲ್ಲಿ ಬಂಗಾಳಿ ಗಾಯಕನೊಬ್ಬನ ಗಾಯನವನ್ನು ಒಳಗೊಂಡ ಅವರ ಜೂಲಿಯಾನಾ ಹಾಡು ಭಾರಿ ಜನಪ್ರಿಯವಾಯಿತು.
ಹೆಲೆನ್ ಅವರ ಇತರ ಪ್ರಸಿದ್ಧ ಹಾಡುಗಳಲ್ಲಿ ಮೋಲ್ಬಾರ್ ಚಂದ್ರೇಮ್, ದರ್ಯಾಚಾ ಲಾರಾಂನಿಂ, ಕಾಳ್ಜಾಂತ್ ಉಲ್ಲಾಸ್ ಬೊರ್ಲಾ, ಘರಾಚೊ ದಿವೊ ಮತ್ತು ಸಾಂಜೆಚಾ ವೆಳಾರ್ ಸೇರಿವೆ. 1973ರಲ್ಲಿ, ಹೆಲೆನ್ ತನ್ನ ಮೂವರು ಮಕ್ಕಳಾದ ಕಾಲಿನ್, ಯವೊನ್ನೆ ಮತ್ತು ಫಿಯೋನಾ ಲೋರೈನ್ ಅವರೊಂದಿಗೆ ಕುವೈತ್ಗೆ ತೆರಳಿದರು. ಕುವೈತ್ನಲ್ಲಿದ್ದಾಗ, ಅವರು ನಾಲ್ಕನೇ ಮಗು ಮರಿಯಾನೆಗೆ ಜನ್ಮ ನೀಡಿದರು.
ತನ್ನ ಬಿಡುವಿಲ್ಲದ ಜೀವನದ ಹೊರತಾಗಿಯೂ, ಕುಟುಂಬ ಮತ್ತು ಪ್ರಸಿದ್ಧ ಕುವೈತ್ ಬ್ಯಾಂಕಿನಲ್ಲಿ ವೃತ್ತಿಜೀವನವನ್ನು ನಿಭಾಯನಿಸುತ್ತಾ, ಹೆಲೆನ್ ಮಂಗಳೂರಿನ ಕಾರ್ಯಕ್ರಮಗಳಲ್ಲಿ ಹಾಡುವುದನ್ನು ಮುಂದುವರೆಸಿದರು. ಅವರು ತಾರಾಂ ಅನಿ ಲಾರಾಂ ಎಂಬ ಶೀರ್ಷಿಕೆಯ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿದರು. 1992ರ ಕುವೈಟ್ ಯುದ್ಧದ ನಂತರ, ಅವರ ಕುಟುಂಬವು ಮುಂಬೈಗೆ ಮರಳಿತು. ಹೆಲೆನ್ ಪತಿ ವೆನೆಂಟಿಯಸ್ 2000ರಲ್ಲಿ ನಿಧನರಾದರು.
ಹೆಲೆನ್ ಅವರ ಸಂಗೀತ ಪರಂಪರೆಯು ಅವರ ಕುಟುಂಬದ ಮೂಲಕ ಜೀವಂತವಾಗಿದೆ. ಆಕೆಯ ಮಗಳು ಫಿಯೋನಾ ಲೋರೈನ್ ಮತ್ತು ಆಕೆಯ ಪತಿ ಆಬ್ರೆ ಅಲೋಶಿಯಸ್ ಅವರು ದೆಹಲಿ ಎನ್. ಸಿ. ಆರ್. ನ ಗುರುಗ್ರಾಮ್ನಲ್ಲಿ ಲೋರೈನ್ ಮ್ಯೂಸಿಕ್ ಅಕಾಡೆಮಿಯನ್ನು ಸಹ-ಸ್ಥಾಪಿಸಿದರು. ಅಲ್ಲಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ 18 ವರ್ಷಗಳ ಕಾಲ ತರಬೇತಿ ನೀಡುತ್ತಿದ್ದಾರೆ.
ಅವರ ಕಿರಿಯ ಮಗಳು ಮೇರಿಯನ್ ಮತ್ತು ಆಕೆಯ ಪತಿ ರೋಹನ್ ಐಮನ್ ಅವರು ದಿ ಸಿಂಗಿಂಗ್ ಎಕ್ಸ್ಪ್ರೆಸ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇದು ಮಹತ್ವಾಕಾಂಕ್ಷಿ ಗಾಯಕರಿಗೆ ತರಬೇತಿ ನೀಡುತ್ತದೆ. ಮೇರಿಯನ್ ಹಲವಾರು ಬಾಲಿವುಡ್ ಚಲನಚಿತ್ರಗಳಿಗೆ ಸೋಲೋ ಹಾಡುಗಳನ್ನು ಹಾಡಿದ್ದಾರೆ. ಉನ್ನತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಹೆಲೆನ್ ಅವರ ಮೊಮ್ಮಗಳು, ಸಾರಾ, ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಸಂಗೀತವನ್ನು ತರಬೇತಿ ನೀಡುತ್ತಾರೆ, ಕಲೆಯ ಬಗ್ಗೆ ತಮ್ಮ ಅಜ್ಜಿಯ ಉತ್ಸಾಹವನ್ನು ಮುಂದುವರಿಸುತ್ತಿದ್ದಾರೆ.
ಕೊಂಕಣಿ ಸಂಗೀತಕ್ಕೆ ಹೆಲೆನ್ ನೀಡಿದ ಕೊಡುಗೆಗಳನ್ನು ಗುರುತಿಸಿ, ಮಂಗಳೂರಿಯನ ಸಂದೇಶ ಸಂಸ್ಥೆಯು 2020ರ ಫೆಬ್ರವರಿಯಲ್ಲಿ ಹೆಲೆನ್ ಅವರಿಗೆ ಪ್ರತಿಷ್ಠಿತ ಸಂದೇಶ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹೆಲೆನ್ ಅವರ ಗಮನಾರ್ಹ ಸಂಗೀತ ಪ್ರಯಾಣವು ಆಫ್ರಿಕಾ, ಬಾಂಬೆ, ಮುಂಬೈ ಮತ್ತು ಕುವೈತ್ನಲ್ಲಿ ಏಳು ದಶಕಗಳ ಕಾಲ ವ್ಯಾಪಿಸಿತ್ತು. ಪ್ರಸಿದ್ಧ ಕರಾವಳಿಯ ಮಹಿಳಾ ಗಾಯಕಿ ಎಂಬುವುದಾಗಿ ಅವರು ಅನೇಕ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಲಿಯದೇ ಉಳಿದಿದ್ದಾರೆ.