ಬಂಟ್ವಾಳ,ಫೆ.15(DaijiworldNews/TA): ಖಾಸಗಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಮಣ್ಣು ಅಗೆದು ನಷ್ಟ ಮಾಡಿದ್ದಾರೆ ಎಂದು ಖಾಸಗಿ ಕಂಪೆನಿ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿ ಬಿಸಿರೋಡು- ಅಡ್ಡಹೊಳೆ ಚತುಷ್ಪಥ ರಸ್ತೆಯ ಕಾಮಗಾರಿ ನಡೆಸುತ್ತಿರುವ ಕೆ.ಎನ್.ಆರ್.ಸಿ.ಕಂಪೆನಿಯ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದೆ.

ಕಂಪೆನಿಯ ಅಧಿಕಾರಿಗಳಾದ ಪಿ.ಆರ್.ಒ.ನಂದಕುಮಾರ್ ಮತ್ತು ಸೈಟ್ ಇಂಜಿನಿಯರ್ ನಿತಿನ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ಮೆಲ್ಕಾರ್ ಹೆದ್ದಾರಿ ಬದಿಯಲ್ಲಿ ಬಾಡಿಗೆಗೆ ಇದ್ದ ಹಳೆಯ ಸಂಚಾರ ಪೊಲೀಸ್ ಠಾಣೆಯ ಸುತ್ತ ಮಣ್ಣು ಅಗೆಯಲಾಗಿದೆ.
ಅಬ್ದುಲ್ ಖಾದರ್ ಅವರ ಸೇರಿದ ಜಾಗ ಇದಾಗಿದ್ದು,ಇವರಿಗೆ ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ಜಾಗಕ್ಕೆ ಪ್ರವೇಶ ಮಾಡಿ ಸುಮಾರು ಒಂದು ತಿಂಗಳಿನಿಂದ ಅವೈಜ್ಞಾನಿಕವಾಗಿ ಮಣ್ಣು ಅಗೆಯಲಾಗಿ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಣ್ಣು ಅಗೆದು ನಷ್ಟ ಉಂಟು ಮಾಡಿದ ಕಂಪೆನಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಖಾದರ್ ಅವರು ತಮ್ಮ ದೂರಿನಲ್ಲಿ ತಿಳಿಸಲಾಗಿದೆ.