ಕಾರ್ಕಳ,ಫೆ.15(DaijiworldNews/TA): ಶಾಸಕ ವಿ. ಸುನಿಲ್ ಕುಮಾರ್ ಅವರು ನಕ್ಸಲ್ ಪೀಡಿತ ಪ್ರದೇಶವೆಂದು ಗುರುತಿಸಿಕೊಂಡಿರುವ ಈದು ಗ್ರಾಮದ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ರಾತ್ರಿ ವಾಸ್ತವ್ಯ ಹೂಡಿದರು. ಇಲ್ಲಿ ವಾಸಿಸುವ 11 ಮಲೆಕುಡಿಯ ಕುಟುಂಬಗಳು ಹಲವು ವರ್ಷಗಳಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರೆಲ್ಲ ಕೃಷಿ ಅವಲಂಬಿತರಾಗಿದ್ದು, ಜೊತೆಗೆ ಜಾನುವಾರು ಸಾಕಾಣೆ ನಡೆಸಿಕೊಂಡಿದ್ದಾರೆ. ಕೋಳಿ ಸಾಕಾಣಿಕೆ ಮಾಡಿಕೊಂಡು ಸಾವಯವ ಕೃಷಿಗೆ ಒತ್ತುಕೊಟ್ಟು ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದಾರೆ. ಈ ವಿಚಾರವನ್ನು ಶಾಸಕರು ಅಹವಾಲು ಸ್ವೀಕಾರ ಸಂದರ್ಭ ತಿಳಿದುಕೊಂಡು ನಿವಾಸಿಗಳ ಶ್ರಮದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.



ಶಾಸಕರು ತಾವಿದ್ದ ಮನೆಗಳಿಗೆ ಬಂದು ಅಹವಾಲು ಸ್ವೀಕರಿಸಿ, ರಾತ್ರಿ ಹೊತ್ತು ನಾಗರಿಕರು ಅನುಭವಿಸುವ ಸಂಕಟ ಆಲಿಸಿದಕ್ಕೆ ಅಲ್ಲಿನ ನಿವಾಸಿಗಳು ಸಹಜವಾಗಿಯೇ ಹರ್ಷ ವ್ಯಕ್ತಪಡಿಸಿದರು. ಆದಿವಾಸಿ ಮನೆಯಲ್ಲಿಯೆ ಉಳಿದುಕೊಂಡು ಉಟೋಪಚಾರವನ್ನು ಸ್ವೀಕರಿಸಿದರು. ಸಮುದಾಯದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕರು ಈ ಕುಟುಂಬಗಳ ಅಭಿವೃದ್ದಿಗೆ ಸರಕಾರ ಮಟ್ಟದಲ್ಲಿ ಅನುದಾನ ತರಿಸುವ ಪ್ರಯತ್ನ ನಡೆಸುವ ಭರವಸೆ ನೀಡಿದರು.
ಪರಿಸರದ ದೇವಸ್ಥಾನ, ದೈವಸ್ಥಾನ, ಕುಲಕಸುಬು, ಕೃಷಿ ಸಂಬಂದಿತ ಸಮಸ್ಯೆಗಳನ್ನು ಸಮಧಾನ ಚಿತ್ತದಿಂದ ಆಲಿಸಿ ಸ್ಪಂದನೆಯ ಜೊತೆಗೆ ಸ್ಥಳಿಯ ದೈವಸ್ಥಾನವೊಂದರ ಅಭಿವೃದ್ದಿಗೆ ಭೂಮಿ ಪೂಜೆ ನೆರವೇರಿಸಿದರು. ಶಾಸಕರು ತಂಗಿದ್ದ ಮನೆಯವರು ಸೇರಿ ಡೀಕಯ್ಯ ಗೌಡ ಹಾಗೂ ಸುತ್ತಲಿನ ನಿವಾಸಿಗಳು ಸಂತ್ರಪ್ತ ಭಾವನೆಯೊಂದಿಗೆ ಶಾಸಕರನ್ನು ಬೀಳ್ಕೊಟ್ಟರು. ಶಾಸಕರು ಸಹಿತ ಜನರ ಸಮಸ್ಯೆಗಳನ್ನು ಸ್ವತಹ ಅನುಭವಿಸಿ ಅಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಭರವಸೆಯೊಂದಿಗೆ ವಾಪಸಾದರು.