ಬಂಟ್ವಾಳ, ಫೆ.15 (DaijiworldNews/AA): ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಸಾನಿಧ್ಯ ವೃದ್ಧಿಗಾಗಿ ಮಾ.1 ರಿಂದ ಮಾ.07 ರ ವರೆಗೆ ಶತಚಂಡಿಕಾಯಾಗ ಹಾಗೂ ಸೇವಾರೂಪದಲ್ಲಿ ದೊಡ್ಡರಂಗಪೂಜೆ ಉತ್ಸವವು ಜರಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.

ಅವರು ಪೊಳಲಿ ಸರ್ವಮಂಗಲ ಕಲ್ಯಾಣ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ರಹ್ಮ ಶ್ರೀ ವೇದಮೂರ್ತಿ ಪೊಳಲಿ ಶ್ರೀ ಕೃಷ್ಣ ತಂತ್ರಿಗಳ ಮಾರ್ಗರ್ಶನದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯಲಿದ್ದು, ತಯಾರಿ ಭರದಿಂದ ಸಾಗಿದೆ ಎಂದರು.
ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಪ್ರವರ್ಗ 'ಎ' ಗೆ ಸೇರಿದ ದೇವಸ್ಥಾನವಾಗಿರುತ್ತದೆ. ದೇವಳದಲ್ಲಿ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತ ಪರಿಹಾರವಾಗಿ ಮಾ. 05 ರಂದು ಸಾವಿರ ಸೀಮೆಯವರು ಸೇರಿ ಶತಚಂಡಿಕಾಯಾಗ ಹಾಗೂ ಮಾ. 06 ರಂದು ಸೇವಾ ರೂಪದಲ್ಲಿ ದೊಡ್ಡರಂಗಪೂಜೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಮಾ. 01 ರಂದು ವಿವಿಧ ಧಾರ್ಮಿಕ ಕಾರ್ಯಗಳಯ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಆರು ವರ್ಷಗಳ ಹಿಂದೆ ನಡೆದ ಬ್ರಹ್ಮಕಲಶ ಉತ್ಸವದ ಮಾದರಿಯ ವ್ಯವಸ್ಥೆಯ ಜೊತೆಗೆ ಶತಚಂಡಿಕಾಯಾಗ ಹಾಗೂ ದೊಡ್ಡ ರಂಗ ಪೂಜೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಸರ್ವರ ಸಹಕಾರವನ್ನು ಯಾಚಿಸುವುದಾಗಿ ತಿಳಿಸಿದರು.
ಪ್ರತಿ ಮನೆಮನೆಗೆ ಆಮಂತ್ರಣ ಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ. ಶತಚಂಡಿಕಾಯಾಗ ಹಾಗೂ ದೊಡ್ಡರಂಗಪೂಜೆಗೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ 15 ಎಕ್ರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲು ತೀರ್ಮಾನಿಸಲಾಗಿದೆ. ಶತಚಂಡಿಕಾಯಾಗಕ್ಕೆ ಸುಮಾರು 25 ಸಾವಿರ ಜನ ಭಕ್ತಾದಿಗಳು ಬರುವ ನಿರೀಕ್ಷೆ ಇದ್ದು, ಮತ್ತು ದೊಡ್ಡರಂಗಪೂಜೆಗೆ ಸುಮಾರು 25 ಸಾವಿರ ಜನ ಭಕ್ತಾದಿಗಳು ಬರುವ ನಿರೀಕ್ಷೆ ಇದೆ. ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಚೆಂಡಿನಗದ್ದೆಯಲ್ಲಿ ಮಾಡಲಾಗುವುದು. ಹಾಗೂ ಶತಚಂಡಿಕಾಯಾಗಕ್ಕೆ ಬರುವ ಭಕ್ತಾದಿಗಳಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು. ದೇವಳಕ್ಕೆ ಬರುವ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ಹೋಗಲು ವ್ಯವಸ್ಥಿತವಾಗಿ ವ್ಯವಸ್ಥೆ ಮಾಡಲಾಗುವುದು. ಈ ಕಾರ್ಯಕ್ರಮ ಯಶ್ವಸಿಯಾಗಿ ನೆರೆವೇರಲು ಸಂಘ ಸಂಸ್ಥೆಗಳ ಸ್ವಯಂ ಸೇವಕರು ತಮ್ಮ ತಂಡದ ಹೆಸರನ್ನು ನೋಂದಾಯಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ಡಾ.ಅಮ್ಮುಂಜೆಗುತ್ತು ಮಂಜಯ್ಯ ಶೆಟ್ಟಿ, ಅರ್ಚಕರಾದ ಪದ್ಮನಾಭ ಭಟ್, ಅನಂತ ಪದ್ಮನಾಭ ಭಟ್ ಉಪಸ್ಥಿತರಿದ್ದರು.