ಬಂಟ್ವಾಳ, ಫೆ.15 (DaijiworldNews/AA): ಕಟೀಲು ಮೇಳದ ತೆಂಕುತಿಟ್ಟಿನ ಹಿರಿಯ ಕಲಾವಿದ ಹಾಸ್ಯಗಾರ ರವಿಶಂಕರ ವಳಕುಂಜರನ್ನು ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಸಂಸ್ಮರಣೆ ಸಮಿತಿ ವತಿಯಿಂದ 'ಬೊಂಡಾಲ ಪ್ರಶಸ್ತಿ'ಯನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಶನಿವಾರ ಶಂಬೂರು ಗ್ರಾಮದ ಬೊಂಡಾಲದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಯಕ್ಷಗಾನ ಬಯಲಾಟ ಸೇವೆಯ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷ ತೆಯಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಶ್ರೀ ಅನಂತ ಪದ್ಮನಾಭ ಅಸ್ರಣ್ಣ ಕಟೀಲು ಇವರು ಶುಭಹಾರೈಸಿ ಆಶೀರ್ವಚನ ನೀಡಿ ಮಾತನಾಡಿದರು. ಧಾರ್ಮಿಕ ಪರಿಷತ್ತು ರಾಜ್ಯ ಸದಸ್ಯ ಎ.ರವಿಶಂಕರ ಶೆಟ್ಟಿ ಬಡಾಜೆ ಗುತ್ತು, ಕೆ.ಕೆ. ಶೆಟ್ಟಿ ಕುಂಬ್ಳೆ ರಾಜರಾಜೇಶ್ವರಿ ದೇವಸ್ಥಾನ ಇವರು ಅಭಿನಂದನೆ ಸಲ್ಲಿಸಿದರು. ರವಿಶಂಕರ ವಳಕ್ಕುಂಜ ಸನ್ಮಾನ ಸ್ವೀಕರಿಸಿ ಮಾತನಾಡಿ ಬೊಂಡಾಲ ಮನೆತನದವರು ಯಕ್ಷಗಾನ ಹಾಗೂ ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಬೊಂಡಾಲ ಸಂಸ್ಮರಣೆ ಮತ್ತು ಬಯಲಾಟ ಸಮಿತಿಯ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ ಪರಿಚಯಿಸಿದರು. ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ ನಿರೂಪಿಸಿದರು. ಸೀತಾರಾಮ ಶೆಟ್ಟಿ ವಂದಿಸಿದರು. ಬಳಿಕ ಕಟೀಲು ಮೇಳದ ವತಿಯಿಂದ ಶ್ರೀ ದೇವಿ ಮಹಾತ್ಮೆ ಬಯಲಾಟ ಪ್ರದರ್ಶನವಾಯಿತು.