ಮಂಗಳೂರು, ಫೆ.15 (DaijiworldNews/AA): ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಕಂಕನಾಡಿ ನಗರ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜೂಜಾಟವಾದ ಅಂದರ್ - ಬಾಹರ್ ಎಂಬ ಅದೃಷ್ಠದ ಆಟವಾಡುತ್ತಿದ್ದ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಒಟ್ಟು ೨೦ ಮಂದಿಯನ್ನು ದಸ್ತಗಿರಿ ಮಾಡಿ 75,920 ರೂ. ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಮೊದಲನೇ ಪ್ರಕರಣದಲ್ಲಿ 2025ರ ಜನವರಿ 13ರಂದು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಡಂಕುದ್ರು ಎಂಬಲ್ಲಿ ಅಕ್ರಮ ಜೂಜಾಟವಾದ ಅಂದರ್ - ಬಾಹರ್ ಆಟವಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಜೂಜಾಟವಾಡುತ್ತಿದ್ದ ಸತ್ತಾರ್ ಸಾಬ್, ಸಂಜಯ ಸಾಹಿ, ಜಿತೇಂದ್ರ ಚೌಧರಿ, ರಾಮ್ ಪುಕಾರ್, ಅಭಿರಾಮ್ ರಾಯ್, ಕಬುತ್ ರಾಯ್, ಸಮರ್ಜೀತ್, ಮುರುಳಿ ಮಾತೋ ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರ ವಶದಿಂದ ಜೂಜಾಟಕ್ಕೆ ಉಪಯೋಗಿಸಿದ 42,800 ರೂ. ನಗದು, ಇಸ್ಪೀಟ್ ಕಾರ್ಡ್ ಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಎರಡನೇ ಪ್ರಕರಣದಲ್ಲಿ 2025ರ ಫೆಬ್ರವರಿ 14ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ ಸ್ಟ್ರೀಟ್ ಬಳಿಯ ಮನೆಯೊಂದರಲ್ಲಿ ಅಕ್ರಮ ಜೂಜಾಟವಾದ ಅಂದರ್ - ಬಾಹರ್ ಆಟವಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಜೂಜಾಟವಾಡುತ್ತಿದ್ದ ನಾಗರಾಜ್, ಮನೋಜ್ ಕುಮಾರ್, ಸಮೀರ್ ಅಹಮ್ಮದ್, ಸಂತೋಷ್, ಮಂಜುನಾಥ, ಶರತ್ ಕುಮಾರ್, ಉಮ್ಮರ್ ಫಾರೂಕ್, ಅಶೋಕ್ ಡಿಸೋಜ, ನವೀನ್ ಅಂಗಡಿ, ಕಿಶನ್, ನೀಲಪ್ಪ ಮಿಟಿ, ಅಪ್ಸರ್ ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರ ವಶದಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 33,120 ರೂ., ಇಸ್ಪೀಟ್ ಕಾರ್ಡ್ ಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಜ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ ಎಂ ರವರ ನೇತೃತ್ವದಲ್ಲಿ ಪಿಎಸ್ಐ ನರೇಂದ್ರ, ಶರಣಪ್ಪ ಭಂಡಾರಿ, ಎಎಸ್ಐ ರಾಮ ಪೂಜಾರಿ, ಸುಜನ್ ಶೆಟ್ಟಿ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.