ಉಡುಪಿ, ಫೆ.16 (DaijiworldNews/AA): ಸಿಬಿಎಸ್ಇ 10ನೇ ತರಗತಿ ಬೋರ್ಡ್ ಪರೀಕ್ಷೆಗಳು ಶನಿವಾರ ಪ್ರಾರಂಭಗೊಂಡಿದೆ. ಈ ನಡುವೆ ಮಣಿಪಾಲದ ಖಾಸಗಿ ಶಾಲೆಯೊಂದರಲ್ಲಿ ಪ್ರಶ್ನೆ ಪತ್ರಿಕೆ ನೀಡಲು ವಿಳಂಬ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರಶ್ನೆ ಪತ್ರಿಕೆ ನೀಡಲು ವಿಳಂಬ ಮಾಡಿರುವ ಹೊರತಾಗಿಯೂ ಹೆಚ್ಚುವರಿ ಕಾಲಾವಕಾಶ ನೀಡಲಾಗಿಲ್ಲ ಎಂದು ಪೋಷಕರು ಮತ್ತು ವಿದ್ಯಾರ್ಥಿಗಳು ಎಂದು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಮಣಿಪಾಲದ ಖಾಸಗಿ ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿದ್ದ 7 ಮತ್ತು 8ನೇ ಹಾಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯನ್ನು 30 ನಿಮಿಷಗಳಷ್ಟು ತಡವಾಗಿ ನೀಡಲಾಗಿದೆ. ಆದಾಗ್ಯೂ, ಸಮಾನವಾದ ಗ್ರೇಸ್ ಅವಧಿಯನ್ನು ನೀಡುವ ಬದಲು, ವಿದ್ಯಾರ್ಥಿಗಳಿಗೆ ಕೇವಲ 10 ನಿಮಿಷ ಹೆಚ್ಚುವರಿ ಸಮಯವನ್ನು ನೀಡಲಾಯಿತು. ಒಂದೆಡೆ ತಡವಾಗಿ ವಿದ್ಯಾರ್ಥಿಗಳ ಕೈಗೆ ಪ್ರಶ್ನೆ ಪತ್ರಿಕೆ ಸೇರಿದೆ ಮತ್ತೊಂದೆಡೆ ಸರಿಯಾದ ಹೆಚ್ಚುವರಿ ಸಮಯ ಸಿಗದೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷೆ ಪೂರ್ಣಗೊಳಿಸಲು ಹೆಣಗಾಡುವಂತಾಯಿತು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಈ ವಿಚಾರವಾಗಿ ಶಾಲಾ ಆಡಳಿತ ಮತ್ತು ಸಂಬಂಧಿತ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸಂಪೂರ್ಣ ತನಿಖೆ ನಡೆಸುವಂತೆ ಪೋಷಕರು ಒತ್ತಾಯಿಸಿದ್ದಾರೆ. ಇದರೊಂದಿಗೆ ಸಮಯಾವಕಾಶ ವಂಚಿತರಾದ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಿ ಅಥವಾ ಸೂಕ್ತವಾದ ನ್ಯಾಯ ಒದಗಿಸಬೇಕು ಎಂದು ಪೋಷಕರು ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸೂಪರಿಂಟೆಂಡೆಂಟ್ ಅವರು ಪೋಷಕರ ಮತ್ತು ವಿದ್ಯಾರ್ಥಿಗಳ ದೂರಿಗೆ ಉಡಾಫೆಯ ಉತ್ತರ ನೀಡಿದೆ ಎಂಬ ದೂರುಗಳು ಕೇಳಿಬಂದಿವೆ.