ಮಂಗಳೂರು,,ಫೆ.17 (DaijiworldNews/AK): ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಪ್ರತಿಭಾ ದಿನಾಚರಣೆ ಫೆಬ್ರವರಿ 16 ರಂದು ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್ನಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಕಂಬಳ ಕ್ಷೇತ್ರದಲ್ಲಿ 69 ಪದಕ ಗೆದ್ದ ಕಂಬಳದ ಕಣ್ಮಣಿ, 6 ಬಾರಿಯ ಚಾಂಪಿಯನ್ ಕೋಣ "ಪದವು ಕಾನಡ್ಕ ದೂಜ"ನಿಗೆ ಶ್ರೀನಿವಾಸ ವಿಶ್ವವಿದ್ಯಾಲಯದ ವತಿಯಿಂದ ಗೌರವಾಭಿನಂದನೆ ಸಲ್ಲಿಸಲಾಯಿತು.
ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್ ಮಾತನಾಡಿ, ಪ್ರಸ್ತುತ ಅನಾರೋಗ್ಯದ ಕಾರಣದಿಂದ ಕಂಬಳ ಓಟವನ್ನು ನಿಲ್ಲಿಸಿ ವಿಶ್ರಾಂತಿ ಜೀವನಕ್ಕೆ ಮುಂದಾದ "ಪದವು ಕಾನಡ್ಕ ದೂಜ"ನಿಗೆ ಶುಭವನ್ನು ಕೋರಿದರು. ತುಳುನಾಡಿನ ಸಂಸ್ಕೃತಿಗೆ ಮತ್ತಷ್ಟು ಮೆರುಗನ್ನು ನೀಡಿದ ಚಾಂಪಿಯನ್ "ಪದವು ಕಾನಡ್ಕ ದೂಜ"ನಿಗೆ ಗೌರವ ಸಲ್ಲಿಸುವುದು ಹೆಮ್ಮೆಯ ವಿಷಯ. ಎಲ್ಲಿಯೂ ನಡೆಯದೇ ಇರುವಂತಹ ಅಪರೂಪದಲ್ಲಿಯೇ ಅಪರೂಪವಾದ ಈ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ , ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾದ ಎ. ವಿಜಯಲಕ್ಷ್ಮಿ ಆರ್ ರಾವ್ ಮತ್ತು ಪ್ರೊ. ಇಆರ್ ಎ. ಮಿತ್ರಾ ಎಸ್ ರಾವ್ ರವರು ಚಾಂಪಿಯನ್ ಕೋಣ "ಪದವು ಕಾನಡ್ಕ ದೂಜ"ನನ್ನು ಗೌರವಪೂರ್ವಕವಾಗಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ "ಪದವು ಕಾನಡ್ಕ ದೂಜ"ನ ಯಜಮಾನ ಡಾಲ್ಫಿ ಡಿಸೋಜ ರವರನ್ನು ವೇದಿಕೆಯ ಮೇಲೆ ಸನ್ಮಾನಿಸಲಾಯಿತು.
ಕಂಬಳದ ತಂಡದ ಎಲ್ಲಾ ಸದಸ್ಯರನ್ನು ಸನ್ಮಾನಿಸಲಾಯಿತು. ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನಿಲ್ ಕುಮಾರ್, ಮೌಲ್ಯಮಾಪನ ಕುಲಸಚಿವರಾದ ಡಾ. ಶ್ರೀನಿವಾಸ ಮಯ್ಯ, ಅಭಿವೃದ್ಧಿ ಕುಲಸಚಿವರಾದ ಡಾ. ಅಜಯ್ ಕುಮಾರ್, ಸಹಾಯಕ ಕುಲಸಚಿವರಾದ ಡಾ. ಜಯಶ್ರೀ ಬೋಳಾರ್, ಕಾರ್ಯಕ್ರಮದ ಸಂಚಾಲಕರಾದ ಡಾ. ಪವಿತ್ರಾ ಕುಮಾರಿ, ಶ್ರೀನಿವಾಸ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಕಂಬಳದ ಅಭಿಮಾನಿಗಳು ಉಪಸ್ಥಿತರಿದ್ದರು.