ಮಂಗಳೂರು, ಫೆ.18 (DaijiworldNews/AA): ಸೆಂಟ್ರಲ್ ರೈಲು ನಿಲ್ದಾಣದ ಬೆಂಚ್ ಮೇಲೆ ನಿತ್ರಾಣಗೊಂಡು ಮಲಗಿದ್ದ ನನ್ನ ಮೇಲೆ ರೈಲ್ವೇ ಪೊಲೀಸರು ಹಲ್ಲೆ ನಡೆಸಿದ ಪರಿಣಾಮ ತಮ್ಮ ಕಾಲನ್ನು ತುಂಡು ಮಾಡುವಂತಾಗಿದೆ ಎಂದು ವಾಯುಪಡೆಯ ಕೇರಳದ ನಿವೃತ್ತ ಅಧಿಕಾರಿ ಪಿ.ವಿ. ಸುರೇಶನ್ ಅವರು ಮಾಡಿರುವ ಆರೋಪವನ್ನು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗವು ತಳ್ಳಿಹಾಕಿದೆ.

ನಿಲ್ದಾಣದ ಸಿಸಿ ಕೆಮರಾದಲ್ಲಿ ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಫೆ. 1ರಂದು ಸುರೇಶನ್ ಮದ್ಯದ ಅಮಲಿನಲ್ಲಿ ನಿಲ್ದಾಣದ ಬೆಂಚಿನಲ್ಲಿ ಮಲಗಿದ್ದರು. ಆಗ ಕರ್ತವ್ಯದಲ್ಲಿದ್ದ ರೈಲ್ವೇ ಪೊಲೀಸ್ ಸಿಬ್ಬಂದಿ ಸುರೇಶನ್ಗೆ ನಿಲ್ದಾಣದ ಫುಡ್ ಪ್ಲಾಝಾ ರೆಸ್ಟೋರೆಂಟ್ ಬಳಿಯಿಂದ ದೂರ ಸರಿಯುವಂತೆ ಸೂಚಿಸಿದ್ದಾರೆ. ಯಾರ ಸಹಾಯವೂ ಇಲ್ಲದೆ ಅವರು ನಡೆದುಕೊಂಡು ಅಲ್ಲಿಂದ ನಿರ್ಗಮಿಸಿದ್ದರು. ಈ ದೃಶ್ಯಾವಳಿಯನ್ನು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ರೈಲ್ವೇ ಪೊಲೀಸರು ಹಲ್ಲೆ ಮಾಡಿರುವ ಬಗ್ಗೆ ಇತರ ಯಾವುದೇ ಪ್ರಯಾಣಿಕರು ದೂರು ನೀಡಿಲ್ಲ ಎಂದು ಇಲಾಖೆ ಹೇಳಿದೆ.
ದೂರುದಾರರು ನಿಶ್ಯಕ್ತಿಯ ಕಾರಣಕ್ಕಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ವೈದ್ಯಕೀಯ ದಾಖಲೆಗಳ ಪ್ರಕಾರ ಅವರು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರು. ಅದೇ ಕಾರಣಕ್ಕಾಗಿ ಅವರ ಕಾಲನ್ನು ಕತ್ತರಿಸಿರಬಹುದು. ಅವರಿಗೆ ನಿಲ್ದಾಣದಲ್ಲಿ ಹೊಡೆದಿರುವ ಅಥವಾ ನಿಲ್ದಾಣವನ್ನು ಬಿಟ್ಟು ಹೋಗುವಂತೆ ಬಲ ಪ್ರಯೋಗ ಮಾಡಿರುವ ಸಾಕ್ಷಿಗಳು ಇಲ್ಲ ಎಂದು ರೈಲ್ವೇ ಇಲಾಖೆ ತಿಳಿಸಿದೆ.