ಮಂಗಳೂರು, ಫೆ.18 (DaijiworldNews/AK): ಆಂಧ್ರಪ್ರದೇಶದಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದ 119 ಕೆಜಿ ಗಾಂಜಾ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.





ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಕಾಸರಗೋಡು ಉಪ್ಪಳ ನಿವಾಸಿ ಮೊಯ್ದೀನ್ ಶಬ್ಬೀರ್(38), ಮಹಾರಾಷ್ಟ್ರದ ಮಹೇಶ್ ದ್ವಾರಿಕಾನಾಥ ಪಾಂಡೆ(30), ಕೇರಳ ಆಲಪ್ಪುಯ ಜಿಲ್ಲೆಯ ಅಜಯ್ ಕೃಷ್ಣ(33), ಹರಿಯಾಣದ ಜೀವನ್ ಸಿಂಗ್(35) ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿಗೆ ಈ ನಾಲ್ವರು ಆರೋಪಿಗಳು ಟಾಟಾ 407 ಗೂಡ್ಸ್ ಟೆಂಪೋ ವಾಹನದಲ್ಲಿ ಹಾಗೂ ಮಾರುತಿ ಅಲ್ಟೋ ಕಾರಿನಲ್ಲಿ ಬೃಹತ್ ಪ್ರಮಾಣದಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಫೆ. 17ರಂದು ಮಂಗಳೂರು ನಗರಕ್ಕೆ ಆಂಧ್ರಪ್ರದೇಶ ರಾಜ್ಯದಿಂದ ಟಾಟಾ 407 ಗೂಡ್ಸ್ ಟೆಂಪೋ ವಾಹನದಲ್ಲಿ ಹಾಗೂ ಮಾರುತಿ ಅಲ್ಟೋ ಕಾರಿನಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಉಳ್ಳಾಲ ತಾಲೂಕು ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ 2 ವಾಹನಗಳನ್ನು ಪತ್ತೆ ಹಚ್ಚಿ ವಾಹನದಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಸೆರೆ ಹಿಡಿದಿದ್ದಾರೆ. ಆಲ್ಟೋ ಕಾರಿನಲ್ಲಿ ಒಟ್ಟು 34 ಕೆಜಿ ಗಾಂಜಾ ಪತ್ತೆಯಾಗಿದ್ದು, 407 ವಾಹನದಲ್ಲಿ 85 ಕೆಜಿ, 40 ಪ್ಯಾಕ್ಗಳೊಂದಿಗೆ ಮೀನಿನ ಟ್ರೇಗಳಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ವಾಹನಗಳು ಕ್ರಮವಾಗಿ ಆಂಧ್ರಪ್ರದೇಶ ಮತ್ತು ಕೇರಳದ ನೋಂದಣಿಯನ್ನು ಹೊಂದಿದ್ದವು. ನಕ್ಸಲ್ ಪೀಡಿತ ಪ್ರದೇಶವಾದ ವಿಶಾಖಪಟ್ಟಣಂ, ಆಂಧ್ರಪ್ರದೇಶದ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆಯಲಾಗುತ್ತಿದ್ದು, ನಂತರ ಕರ್ನಾಟಕ, ಕೇರಳ ಹಾಗೂ ಇತರ ರಾಜ್ಯಗಳಿಗೆ ಸಾಗಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಗಾಂಜಾ ಸಾಗಾಟಕ್ಕೆ ಉಪಯೋಗಿಸಿದ ಮೀನು ಸಾಗಾಟದ ಟೆಂಪೋ ಹಾಗೂ ಮಾರುತಿ ಆಲ್ಟೋ ಕಾರನ್ನು ಹಾಗೂ ಈ ವಾಹನಗಳಲ್ಲಿ ಸಾಗಾಟ ಮಾಡುತ್ತಿದ್ದ ರೂ. 35,00,000/- ಮೌಲ್ಯದ ನಿಷೇಧಿತ ಮಾದಕ ವಸ್ತುವಾದ 119 ಕೆಜಿ ಗಾಂಜಾವನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಅಲ್ಲದೇ 5 ಮೊಬೈಲ್ ಫೋನ್ ಗಳು, ಮೀನು ಸಾಗಾಟಕ್ಕೆ ಉಪಯೋಗಿಸುವ ಮೀನಿನ ಕ್ರೆಟ್ ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 51,00,000/- ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳ ಪೈಕಿ ಮೊಯಿದ್ದೀನ್ ಶಬ್ಬೀರ್ ಎಂಬಾತನ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಕಾಸರಗೋಡು, ಮಂಜೇಶ್ವರ, ಕುಂಬ್ಳೆ, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ದನಕಳ್ಳತನ, ಹಲ್ಲೆ, ಕೊಲೆ ಹೀಗೆ ಒಟ್ಟು 12 ಪ್ರಕರಣ ದಾಖಲಾಗಿರುತ್ತದೆ. ಅಲ್ಲದೇ ಆಂಧ್ರಪ್ರದೇಶದಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ದಾಖಲಾಗಿರುತ್ತದೆ. ಈತನನ್ನು 2023 ನೇ ಇಸವಿಯಲ್ಲಿ ಸಿಸಿಬಿ ಪೊಲೀಸರ ತಂಡ ದಸ್ತಗಿರಿ ಮಾಡಿ ಆತನ ವಶದಿಂದ 23.250 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಈತನು ಸುಮಾರು ಒಂದೂವರೆ ವರ್ಷ ಜೈಲ್ ನಲ್ಲಿದ್ದು, ಸುಮಾರು 6 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡವನು ಪುನಃ ಅದೇ ಗಾಂಜಾ ಸಾಗಾಟ ಕೃತ್ಯದಲ್ಲಿ ಭಾಗಿಯಾಗಿರುತ್ತಾನೆ.
ಇನ್ನೋರ್ವ ಆರೋಪಿ ಮಹೇಶ್ ದ್ವಾರಿಕಾನಾಥ ಪಾಂಡೆ ಎಂಬಾತನ ವಿರುದ್ಧ ಆಂಧ್ರಪ್ರದೇಶದ ರಾಜಮಂಡ್ರಿ ಎಂಬಲ್ಲಿ 2 ಗಾಂಜಾ ಸಾಗಾಟ ಪ್ರಕರಣ ದಾಖಲಾಗಿರುತ್ತದೆ. ಅಜಯ್ ಕೃಷ್ಣನ್ ಎಂಬಾತನ ವಿರುದ್ಧ ಆಲಪ್ಪುಳಂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಹಲ್ಲೆ, ಗಾಂಜಾ ಮಾರಾಟ, ಹಾಗೂ ನಕಲಿ ಚಿನ್ನವನ್ನು ಬ್ಯಾಂಕ್ ನಲ್ಲ ಅಡವಿರಿಸಿ ವಂಚನೆ ಮಾಡಿರುವ ಹೀಗೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿ ಜೀವನ್ ಸಿಂಗ್ ಎಂಬಾತನ ವಿರುದ್ಧ ಆಂಧ್ರಪ್ರದೇಶದ ಮೊತುಕುಡಮ್ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣವೊಂದು ದಾಖಲಾಗಿರುತ್ತದೆ. ಆರೋಪಿಗಳು ಕರ್ನಾಟಕ, ಕೇರಳ ಸಾರ್ವಜನಿಕರಿಗೆ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಆಂಧ್ರಪ್ರದೇಶದಿಂದ ಗಾಂಜಾವನ್ನು ಖರೀದಿಸಿಕೊಂಡು ಮಂಗಳೂರು ನಗರಕ್ಕೆ ಹಾಗೂ ಕೇರಳಕ್ಕೆ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದರು. ಈ ಬೃಹತ್ ಗಾಂಜಾ ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ಈ ಬೃಹತ್ ಗಾಂಜಾ ಮಾರಾಟ/ಸಾಗಾಟ ಜಾಲದ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರು (ಕಾನೂನು & ಸುವ್ಯವಸ್ಥೆ ವಿಭಾಗ) ರವರಾದ ಸಿದ್ದಾರ್ಥ ಗೋಯಲ್ ಐಪಿಎಸ್ ಮತ್ತು ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ ವಿಭಾಗ) ರವರಾದ ಕೆ. ರವಿಶಂಕರ್ ಕೆಎಸ್ಪಿಎಸ್ ರವರ ನಿರ್ದೇಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ ಎಂ, ಪಿಎಸ್ಐ ಶರಣಪ್ಪ ಭಂಡಾರಿ ಹಾಗೂ ಎಸ್ಐಯವರಾದ ಮೋಹನ್ ಕೆ ವಿ, ರಾಮ ಪೂಜಾರಿ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.