ಮಂಗಳೂರು, ಫೆ.18(DaijiworldNews/TA): ಫೆಬ್ರವರಿ 22, ಶನಿವಾರದಂದು ಅಂಬೇಡ್ಕರ್ ಭವನದಲ್ಲಿ "ಮಾಯಿದ ಮಹಾಕೂಟ" ಜರುಗಲಿದೆ. ತುಳುಭಾಷೆ ಸಂಸ್ಕೃತಿ ಅಭಿವೃದ್ಧಿ, ಸಂಪ್ರದಾಯ ನೆಲೆಯಲ್ಲಿ ಅಖಿಲ ಭಾರತ ತುಳು ಒಕ್ಕೂಟ (ರಿ.) ಸ್ಥಾಪನೆಯಾಗಿದೆ. ದೇಶ-ವಿದೇಶದಲ್ಲಿ ಸುಮಾರು 48 ತುಳು ಸೇವಾ ಸಂಘ-ಸಂಸ್ಥೆಗಳು ಒಕ್ಕೂಟದ ಸದಸ್ಯರಾಗಿ ತಮ್ಮ ತಮ್ಮ ಕ್ಷೇತ್ರದಲ್ಲಿ ತುಳು ಭಾಷೆ ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮ/ಸಮ್ಮೇಳನ ಸಮಾರಂಭ ನಿರಂತರವಾಗಿ ನಡೆಸಿ ತುಳುಭಾಷೆ ಮಾನ್ಯತೆಗೆ ಗಮನ ಸೆಳೆಯುತ್ತಿದೆ ಎಂದು ನವನೀತ್ ಶೆಟ್ಟಿ ಕದ್ರಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಅಗಸ್ಟ್ 24ರಂದು ಒಕ್ಕೂಟದ ವತಿಯಿಂದ "ತುಳುನಾಡ ಜಾನಪದ ಉಚ್ಚಯ 2024" ಕಾರ್ಯಕ್ರಮವನ್ನು ನಡೆಸಿ ಇದರಲ್ಲಿ ತುಳುವೆರ ದಿಬ್ಬಣ, ಪೆರ್ಮೆದ ತುಳುವೆ ಪ್ರಶಸ್ತಿ, ಗಿಡ್ಡೆರು ಮಾನಾದಿಗೆ, ಅಕಾಡೆಮಿಗಳ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಹಲವಾರು ಅತಿಥಿ ಗಣ್ಯರ ಉಪಸ್ಥಿತಿ ಬಹಳ ವಿಜೃಂಭನೆಯಿಂದ ಜರುಗಿತ್ತು ಎಂದರು.
ಸಂಘಟನೆಯ ಬಲವರ್ಧನೆಯ ನಿಟ್ಟಿನಲ್ಲಿ ಫೆಬ್ರವರಿ 22, ಶನಿವಾರದಂದು ಅಪರಾಹ್ನ ಗಂಟೆ 3.30ರಿಂದ ಅಂಬೇಡ್ಕರ್ ಭವನ ಉರ್ವಾಸ್ಟೋರ್ನಲ್ಲಿ ಜರಗಲಿರುವ "ಮಾಯಿದ ಮಹಾಕೂಟ" ಸಮಾರಂಭವನ್ನು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಗುರುದೇವದತ್ತ ಸಂಸ್ಥಾನ ಶ್ರೀ ದತ್ತಾಂಜನೇಯ ಕ್ಷೇತ್ರ ಒಡಿಯೂರ್ರವರು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಯು.ಟಿ.ಖಾದರ್, ಸಭಾಪತಿ ಕರ್ನಾಟಕ ಸರಕಾರ ಮತ್ತು ಡಾ॥ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಲೆಫ್ಟಿನೆಂಟ್ ಜನರಲ್ ಅಂಬಾಸಿಡರ್, ಉದ್ಯಮಿ, ಸಮಾಜ ಸೇವಕ, ವಾಗ್ನಿ, ತ್ರಿಭಾಷಾ ಚಿತ್ರ. ನಿರ್ಮಾಪಕ ಹಾಗೂ ಅವರ ಪತ್ನಿ ಶ್ರೀಮತಿ ಆಲೀಸ್ (ಕೊರೆಯಾ) ಫೆರ್ನಾಂಡಿಸ್ರವರು ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀ ಎ.ಸಿ. ಭಂಡಾರಿಯವರು ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ತಮ್ಮನ ಬಲ್ಮನ : ಸಭಾ ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯ ಕೂಟಗಳಲ್ಲಿ ತುಳು ಭಾಷಾ ಸಂಸ್ಕೃತಿಗೆ ಶ್ರಮಿಸಿದ ಅಡೂರ್ ಉಮೇಶ್ ನ್ಯಾಕ್, ಹಿರಿಯ ನ್ಯಾಯವಾದಿ, ಕಾಸರಗೋಡು, ಶ್ರೀ ಜಯಶೆಟ್ಟಿ, ಮಾಜಿ ಕಾರ್ಪೋರೇಟರ್ ಪೂಣೆ, ಶ್ರೀ ಯು.ಜಿ. ದೇವಾಡಿಗ, ತುಳು ಸಂಘಟಕರು ಉಡುಪಿ, ಶ್ರೀ ಕೆ. ಸೇಸಪ್ಪ ರೈ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ರಾಮಕುಂಜ, ಶ್ರೀ ಕೆ.ಎಚ್. ದಾಸಪ್ಪ ರೈ, ಹಿರಿಯ ಯಕ್ಷಗಾನ ಕಲಾವಿದರು ಪುತ್ತೂರುರವರನ್ನು ಪೆರ್ಮೆದ ಸಾಧಕರ್ ಎಂದು ಸನ್ಮಾನಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 4.00ರಿಂದ 5.00ರ ತನಕ ಶ್ರೀ ದಿನೇಶ್ ಕೊಡಪದವು ಮತ್ತು ಅವರ ಕೂಟದಿಂದ “ಯಕ್ಷತೆಲಿಕೆ" ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಎ.ಸಿ. ಭಂಡಾರಿ, ಉಪಾಧ್ಯಕ್ಷರುಗಳಾದ ಇಂದ್ರಾಳಿ ಜಯಕರ ಶೆಟ್ಟಿ ಮತ್ತು ಯೋಗೀಶ್ ಶೆಟ್ಟಿ ಜೆಪ್ಪು, ಪ್ರಧಾನ ಕಾರ್ಯದರ್ಶಿ ಪಿ.ಎ. ಪೂಜಾರಿ, ಕೋಶಾಧಿಕಾರಿ ಶ್ರೀಮತಿ ವಿಜಯಲಕ್ಷ್ಮಿ ಬಿ.ಕೆಟ್ಟ ಸಮಾರಂಭದ ಪ್ರಧಾನ ಸಂಚಾಲಕ ಕದ್ರಿ ನವನೀತ್ ಶೆಟ್ಟಿ, ಒಕ್ಕೂಟದ ಮಾಧ್ಯಮ ವಕ್ತಾರ ಮುಲ್ಕಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.