ಮಂಗಳೂರು, ಫೆ.18(DaijiworldNews/TA): ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಾಕ್ಸಮರ ಕಂಡು ಸಚಿವರೇ ದಂಗಾಗಿ ಹೋಗಿದ್ದಾರೆ. ಅಕ್ರಮ ಮರಳುಗಾರಿಕೆ ವಿಚಾರವಾಗಿ ಕೆಡಿಪಿ ಸಭೆ ನಡೆದಿದ್ದು ಸಭೆಯಲ್ಲಿ ಅಕ್ರಮ ಮರಳುಗಾರಿಕೆಯ ಹೊಣೆಯನ್ನು ಒಬ್ಬರ ಮೇಲೊಬ್ಬರು ಹಾಕಿಕೊಂಡು ಅಧಿಕಾರಿಗಳು ಆರೋಪ ಪ್ರತ್ಯಾರೋಪ ಮಾಡಿದ್ದಾರೆ.


ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಕೃಷ್ಣವೇಣಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡಾಗ ನಮಗೆ ಪೊಲೀಸ್ ಸಪೋರ್ಟ್ ಇಲ್ಲ, ಕಾಲ್ ಮಾಡಿದ್ರೆ ರಿಸೀವ್ ಮಾಡಲ್ಲ ಅಂದ ಕೃಷ್ಣವೇಣಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮೇಲೆ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ನನ್ನ ಮೊಬೈಲ್ ನೋಡಿ, ಒಂದೇ ಕಾಲ್ ಬಂದಿಲ್ಲ, ಪರ್ಸನಲ್ ನಂಬರ್ ಕೊಟ್ಟಿದ್ದೇನೆ ಎಂದು ವಾದಿಸಿದರು. ಈ ವೇಳೆ ಇಬ್ಬರ ನಡುವೆ ವಾಕ್ಸಮರ ಏರ್ಪಟ್ಟಿತ್ತು.
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ವಿರುದ್ಧವೂ ಕೃಷ್ಣವೇಣಿ ಆರೋಪಿಸಿದ್ದಾರೆ. ಕೃಷರ್, ಬಿಲ್ಡರ್, ಲಾರಿ ಮಾಲಕರ ಸಭೆ ಕರೆಯೋಣ ಅಂದ್ರೂ ಡಿಸಿ ಕೇಳಿಲ್ಲ ಕಾರಣ ಇಲ್ಲದೇ ಸಭೆಗಳನ್ನು ಡಿಸಿ ಸಭೆ ಮುಂದೂಡಿದ್ದಾರೆ ಎಂದು ಡಿಸಿ ವಿರುದ್ದ ಕೃಷ್ಣವೇಣಿ ಕಿಡಿಕಾರಿದ್ದು, ಚೀಪ್ ಆಗಿ ಮಾತನಾಡಬೇಡಿ, ಈ ಸಭೆಯಲ್ಲಿ ಚರ್ಚೆ ಮಾಡಲು ಇಷ್ಟ ಇಲ್ಲ ಎಂದು ಡಿಸಿ ಗರಂ ಆದ ಘಟನೆಯೂ ನಡೆಯಿತು. ಅಧಿಕಾರಿಗಳ ಆರೋಪ ಪ್ರತ್ಯಾರೋಪ ಕಂಡು ಪೆಚ್ಚಾದ ಸಚಿವ ಗುಂಡೂರಾವ್ ಕೃಷ್ಣವೇಣಿ ಮತ್ತು ಅನುಪಮ್ ಅಗರ್ವಾಲ್ ಗೆ ಕ್ಲಾಸ್ ತೆಗೆದುಕೊಂಡರು. ಸರಿ ಮಾಡಿಕೊಂಡು ಹೋಗಿ ನಿಮ್ಮದೂ ತಪ್ಪಿದೆ ಎಂದು ಸಚಿವ ಗುಂಡೂರಾವ್ ಸೂಚನೆ ನೀಡಿದರು.