ಬಂಟ್ವಾಳ,ಫೆ.18 (DaijiworldNews/AK): ರಾಜ್ಯ ಲೋಕೋಪಯೋಗಿ ಇಲಾಖಾ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಂಗಳವಾರ ದುರಸ್ಥಿ ಕಾರ್ಯ ಪ್ರಗತಿಯಲ್ಲಿರುವ ಪೊಳಲಿ- ಅಡ್ಡೂರು ಸೇತುವೆಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ಇಲಾಖಾ ಇಂಜಿನಿಯರ್ ಗಳಿಂದ ಮಾಹಿತಿ ಪಡೆದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಈ ಸಂದರ್ಭದಲ್ಲಿ ಹಾಜರಿದ್ದು,ಇತಿಹಾಸ ಪ್ರಸಿದ್ದ ಪೊಳಲಿ ಕ್ಷೇತ್ರದಲ್ಲಿ ಮುಂದಿನ ತಿಂಗಳು ನಡೆಯುವ ಶತಚಂಡಿಕಾಯಾಗ ಬಳಿಕ ಒಂದು ತಿಂಗಳ ಪರ್ಯಂತ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕ್ಷೇತ್ರಕ್ಕಾಗಮಿಸುವ ಭಕ್ತರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸೇತುವೆಯ ಸಾಮಥ್ಯ೯ವನ್ನು ವೃದ್ದಿಸುವ ನಿಟ್ಟಿನಲ್ಲಿ ಯಂತ್ರದ ಮೂಲಕ ಸೇತುವೆಯನ್ನು ಮೇಲಕ್ಕೆತ್ತಿ ಅದರ ಅಡಿ ಭಾಗದಲ್ಲಿ ಬೇರಿಂಗ್ ಅಳವಡಿಸುವ ಕೆಲಸ ಆಗಬೇಕಾಗಿದ್ದು,ಇದಕ್ಕೆ ಹತ್ತರಿಂದ ಹದಿನೈದು ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಇಂಜಿನಿಯರ್ ಗಳು ಸಚಿವರ ಗಮನಕ್ಕೆ ತಂದರು.
ಪೊಳಲಿ ಕ್ಷೇತ್ರದ ಕಾರ್ಯಕ್ರಮದ ಹಿನ್ನಲೆಯಲ್ಲಿ ಈ ಕೂಡಲೇ ಸೇತುವೆಯಲ್ಲಿ ಎಲ್ಲಾ ವಾಹನ ಸಂಚಾರ ಸ್ಥಗಿತಗೊಳಿಸಿ ಬೇರಿಂಗ್ ಅಳವಡಿಸುವ ಕಾರ್ಯವನ್ನು ಅದ್ಯತೆಯ ನೆಲೆಯಲ್ಲಿ ಮೊದಲಿಗೆ ಮುಗಿಸಿದ ಬಳಿಕ ಲಘ ವಾಹನಗಳ ಸಂಚಾರ ಅನುಕೂಲ ಮಾಡಿ ಕ್ಷೇತ್ರದ ಜಾತ್ರೆ ಮುನ್ನ ಎಲ್ಲಾ ಕಾಮಗಾರಿ ಪೂರ್ಣಗೊಳಿಸುವಂತೆ ಸಚಿವ ಸತೀಶ್ ಜಾರಕಿಹೊಳಿ ಇಂಜಿನಿಯರ್ ಅವರಿಗೆ ಸೂಚಿಸಿದರು.
ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಸೆಳೆದು ಜಿಲ್ಲಾ ಪ್ರವಾಸದಲ್ಲಿರುವ ಲೋಕೋಪಯೋಗಿ ಇಲಾಖಾ ಸಚಿವರು ಪೊಳಲಿ- ಅಡ್ಡೂರು ಸೇತುವೆ ಕಾಮಗಾರಿಯ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದರು.
ಸಚಿವರ ಭೇಟಿಯ ವೇಳೆ ಮಾಜಿ ಸಚಿವ ರಮಾನಾಥ ರೈ, ಕರಿಯಂಗಳ ಗ್ರಾ.ಪಂ.ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ,ತಾ.ಪಂ. ಮಾಜಿ ಸದಸ್ಯ ವೆಂಕಟೇಶ್ ನಾವುಡ,ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಮ್,ಮುಖ್ಯ ಎಂಜಿನಿಯರ್ ಗಳಾದ ಬಿ.ವಿ. ಗೋಕುಲ್ ದಾಸ್, ಕಾರ್ಯ ಪಾಲಕ ಎಂಜಿನಿಯರ್ ಅಮರನಾಥ ಜೈನ್. ಎಇಇಗಳಾದ ಜೈ ಪ್ರಕಾಶ್, ಪ್ರೀತಂ , ಅರುಣ್ ಪ್ರಕಾಶ್,ದಿಲೀಪ್ ದಾಸ್ ಪ್ರಕಾಶ್ ,ಹೇಮಂತ್ ಹಾಜರಿದ್ದರು. ಬಳಿಕ ಸಚಿವ ಸತೀಶ್ ಜಾರಕಿಹೊಳಿ ಅವರು ಕಲ್ಲಗುಡ್ಡೆ ಎಂಬಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ನಡೆಸುವ ಸಂಚಾರ ಗಣತಿ ಕಾರ್ಯದ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅನುದಾನ ಕೋರಿ ಮನವಿ:
ಬಿ.ಸಿ.ರೋಡ್ – ಪೊಳಲಿ ರಸ್ತೆಯಲ್ಲಿ 3.3 ಕಿ.ಮೀ.ರಸ್ತೆಯ ಅಭಿವೃದ್ಧಿಗೆ ಸಿಆರ್ ಎಫ್ ನಿಧಿಯಲ್ಲಿ 2 ಕೋ.ರೂ.ಅನುದಾನ ಮಂಜೂರುಗೊಂಡು ಈಗಾಗಲೇ ಶಿಲಾನ್ಯಾಸ ನೆರವೇರಿಸಲಾಗಿದೆ. ಅದೇರೀತಿ ಪಿಡ್ಲ್ಯುಡಿ ಇಲಾಖೆಯ ಎಪಿಂಡೆಕ್ಸ ಯೋಜನೆಯಲ್ಲಿ 4 ಕೋ.ರೂ.ವಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಾಕಿ ಇರುವ ಟೆಂಡರ್ ಕರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದ್ದು,ಇದಕ್ಕೆ ಸ್ಪಂದಿಸಿರುವ ಸಚಿವರು ತಕ್ಷಣ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ರಸ್ತೆಯನ್ನು ಪೂರ್ಣ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಉಳಿಕೆ ಭಾಗದ ರಸ್ತೆ ಕಾಮಗಾರಿಗೂ ಹೆಚ್ಚುವರಿ ಅನುದಾನ ಒದಗಿಸುವಂತೆ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲಿ ಈ ಸಂದರ್ಭ ಮನವಿ ಮಾಡಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಸುದ್ದಿಗಾರರಿಗೆ ತಿಳಿಸಿದರು.