ಬೆಳ್ತಂಗಡಿ, ಜೂ13(Daijiworld News/SS): ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿರುವ ಹಿನ್ನಲೆ, ಜಿಲ್ಲೆಯಲ್ಲಿನ ನೀರಿನ ಸಮಸ್ಯೆ ಕೊಂಚ ಕಡಿಮೆಯಾಗಿದೆ. ಇತಿಹಾಸ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳದಲ್ಲಿಯೂ ತಲೆ ದೋರಿದ್ದ ನೀರಿನ ಸಮಸ್ಯೆಗೆ ಸ್ವಲ್ಪ ಮುಕ್ತಿ ಸಿಕ್ಕಿದೆ.
ಜಿಲ್ಲೆಯ ಜೀವನದಿ ನೇತ್ರಾವತಿಯಲ್ಲಿ ಅಲ್ಪ ಪ್ರಮಾಣದ ನೀರಿನ ಹರಿವು ಕಂಡು ಬಂದ ಕಾರಣ ಧರ್ಮಸ್ಥಳ ಸ್ನಾನ ಘಟ್ಟದಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸಿದೆ.
ಕರಾವಳಿಯಲ್ಲಿ ನೀರಿನ ಅಭಾವ ಕಾಣಿಸಿಕೊಂಡ ಕಾರಣ ರಾಜ್ಯದ ನಾನಾ ಭಾಗಗಳಿಂದ ಬರುವ ಯಾತ್ರಾರ್ಥಿಗಳು ತಮ್ಮ ಯಾತ್ರೆಯನ್ನು ಕೆಲ ದಿನಗಳ ಕಾಲ ಮುಂದೂಡುವಂತೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕಳೆದ ತಿಂಗಳು ಭಕ್ತರಲ್ಲಿ ವಿನಂತಿಸಿದ್ದರು. ಪರಿಸ್ಥಿತಿಗೆ ತಕ್ಷಣ ಸ್ಪಂದಿಸಿದ ರಾಜ್ಯ ಸರಕಾರ ನೇತ್ರಾವತಿಗೆ ಕಿಂಡಿ ಅಣೆಕಟ್ಟು ಕಟ್ಟುವ ಬಗ್ಗೆ ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸೂಚಿಸಿತ್ತು. ಇದೀಗ ಕರಾವಳಿಯಲ್ಲಿ ಮಳೆಯಾಗುತ್ತಿರುವ ಪರಿಣಾಮ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಿದೆ.
ವಾಯುಭಾರ ಕುಸಿತದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಇದೇ ವೇಳೆ ಪಶ್ಚಿಮ ಘಟ್ಟದ ತಪ್ಪಲಲ್ಲೂ ಮಳೆಯಾಗಿದೆ. ಕುಮಾರಧಾರ, ಕೆಂಪುಹೊಳೆ, ಎತ್ತಿನಹಳ್ಳಗಳಲ್ಲಿ ನೀರಿನ ಹರಿವು ಕಾಣಿಸಿಕೊಂಡಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬಾರಿ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಈಗ ಮಳೆಯೂ ಸುರಿದ ಕಾರಣ ಅಲ್ಲಿ ಮತ್ತಷ್ಟು ನೀರಿನ ಸಮೃದ್ದಿ ಕಾಣಿಸಿಕೊಂಡಿದೆ.
ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಮ್ನಲ್ಲಿ ದಿನ ಕಳೆದಂತೆ ನೀರಿನ ಮಟ್ಟ ಏರುತ್ತಿದ್ದು, ಸದ್ಯದಲ್ಲೇ ನಗರದಲ್ಲಿ ಜಾರಿಯಲ್ಲಿರುವ ರೇಶನಿಂಗ್ ಪದ್ಧತಿಯನ್ನು ಕೈಬಿಡುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೇತ್ರಾವತಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ.