ಮಂಗಳೂರು, ಫೆ.20 (DaijiworldNews/AK):ಬಹುಮಹಡಿ ಕಟ್ಟಡ ಹಾಗೂ ಪೆಟ್ರೋಲ್ ಪಂಪು ತಡೆಗೋಡೆ ಕುಸಿತದ ಅಪಾಯ ಸಮಸ್ಯೆ ಸೇರಿದಂತೆ ಡ್ರೈನೇಜ್ ವ್ಯವಸ್ಥೆಯಿಲ್ಲದೆ ಬಹುಮಹಡಿ ಕಟ್ಟಡಕ್ಕೆ ಪರವಾನಿಗೆ ಕೊಟ್ಟ ಬೆಳ್ಮ ಗ್ರಾಮ ಪಂಚಾಯತ್ ಹಾಗೂ ಇಲ್ಲಿಯ ಮುಖ್ಯ ರಸ್ತೆಯನ್ನು ಮಣ್ಣು ಹಾಕಿ ಬಂದ್ ಮಾಡಿದ ಪಿಡಬ್ಲ್ಯೂಡಿ ಅಧಿಕಾರಿಗಳ ವಿರುದ್ದ ಕಾನೆಕೆರೆ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಕಾನೆಕೆರೆ ನಿವಾಸಿಗಳು ಬೆಳ್ಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕಾನೆಕೆರೆ ನಾಗರಿಕ ಹೋರಾಟ ಸಮಿತಿಯ ಗೌರವ ಸಲಹೆಗಾರ ಸುನಿಲ್ ಕುಮಾರ್ ಬಜಾಲ್, ದೇರಳಕಟ್ಟೆ ಅಭಿವೃದ್ಧಿ ಪ್ರದೇಶ ಅಂತ ಹೇಳ್ತಿದ್ದ್ದಾರೆ. ಆದರೆ ಅದರ ಹಿಂದೆ ಎಷ್ಟು ನೋವಿದೆ ಎನ್ನುವುದಕ್ಕೆ ಕಾನಕೆರೆಯ ನಿವಾಸಿಗಳೇ ಇದಕ್ಕೆ ಸಾಕ್ಷಿ. ಇಲ್ಲಿರುವ ಪೆಟ್ರೋಲ್ ಪಂಪ್ ನ ತಡೆಗೋಡೆ ಬಿರುಕು ಬಿಟ್ಟಿದ್ದು ಕುಸಿಯುವ ಭೀತಿಯಲ್ಲಿದೆ. ಅಲ್ಲದೆ ದೇರಳಕಟ್ಟೆಗೆ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಮಣ್ಣು ಕುಸಿಯುವ ಭೀತಿಯಲ್ಲಿ ಪಿಡಬ್ಲ್ಯುಡಿ ಇಲಾಖೆ ಬಂದ್ ಮಾಡಿದ್ದು, ಇನ್ನೂ ತೆರವುಗೊಳಿಸಿಲ್ಲ. ಬಹುಮಹಡಿ ಕಟ್ಡಡಗಳಿಂದ ತ್ಯಾಜ್ಯದ ನೀರು ಇಲ್ಲಿಯ ರಸ್ತೆಯಲ್ಲೇ ಹರಿದಾಡಿ ಬಾವಿ ನೀರು ಕಲುಷಿತಗೊಂಡಿದೆ. ಎಷ್ಟೋ ಜನರು ಜೀವ ಕಳೆದುಕೊಂಡಿದ್ದಾರೆ ಇಂತಹ ಅಪಾಯಕಾರಿ ಸ್ಥಿತಿಯಲ್ಲಿಯೂ ಕೂಡಾ ಪಂಚಾಯತ್, ಪಿಡಬ್ಲ್ಯೂಡಿ, ಜಿಲ್ಲಾಡಳಿತ ಮಾತನಾಡದೆ ಮೌನವಾಗಿದ್ದಾರೆ ಎಂದು ತಿಳಿಸಿದರು. ಈ ವೇಳೆ ಸಂತೋಷ್ ಬಜಾಲ್, ಸಮಿತಿ ಗೌರವ ಅಧ್ಯಕ್ಷ ರಫೀಕ್ ಕಾನೆಕೆರೆ, ಅಧ್ಯಕ್ಷ ಅಬ್ದುಲ್ ಖಾದರ್ ಎನ್ ಎಚ್ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನೆಗೆ ಮುನ್ನ ದೇರಳಕಟ್ಟೆ ಜಂಕ್ಷನ್ ನಿಂದ ಬೆಳ್ಮ ಪಂಚಾಯತಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ಪಂಚಾಯತ್ ಎದುರು ಧರಣಿ ನಡೆಸಿದರು. ಧರಣಿ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ ಆಗಮಿಸಿ ಮನವಿ ಸ್ವೀಕರಿಸಿ ಫೆ.25 ರಂದು ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದರು.