ಮಂಗಳೂರು,,ಫೆ.20 (DaijiworldNews/AK): ಶಾಲೆಗಳಲ್ಲಿ ರಂಗೋತ್ಸವ ಎಂಬ ಮನರಂಜನಾ ಕಾರ್ಯಕ್ರಮ ನಡೆಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿರುವ ವಿಚಾರ ಕರವಾಳಿ ಭಾಗದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟಿನ ಚರ್ಚೆಗಳು ನಡೆಯುತ್ತಿದೆ. ದೈವಾರಾಧಕರಿಂದ ಹಿಡಿದು ದೈವದ ಚಾಕರಿ ಮಾಡುವ ಎಲ್ಲಾ ಬಂಧುಗಳು, ಹಿಂದೂ ಸಂಘಟನೆಗಳು ಸೇರಿದಂತೆ ಬಿಜೆಪಿ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದ್ದೇವೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.ಶಾಲೆಗಳಲ್ಲಿ ರಂಗೋತ್ಸವ ಎಂಬ ಮನರಂಜನಾ ಕಾರ್ಯಕ್ರಮ ನಡೆಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿರುವ ವಿಚಾರದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ದೈವಾರಾಧನೆ’ ಸಾವಿರಾರು ವರ್ಷಗಳಿಂದ ತುಳುನಾಡಿನಲ್ಲಿರುವ ಧಾರ್ಮಿಕ ಆಚರಣೆಯಾಗಿದೆ. ಆದರೆ ಇದು ಮನರಂಜನಾ ಕಲೆಯಲ್ಲ. ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನಡೆಸುವ ಪ್ರತಿಭಾ ಕಾರಂಜಿಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವ ಸಂಗತಿಯಲ್ಲ. ಇದರಿಂದ ಸಮಸ್ತ ತುಳುನಾಡಿನ ದೈವಭಕ್ತರ ನಂಬಿಕೆಗೆ ಧಕ್ಕೆಯಾಗಿದೆ. ರಾಜ್ಯ ಸರ್ಕಾರ ಮನುಷ್ಯನಿಗೆ ಅನ್ಯಾಯ ಮಾಡುತ್ತಿದೆ. ಆದರೆ ದೈವಕ್ಕೂ ಅನ್ಯಾಯವಾದಾಗ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ದೈವಕ್ಕೆ ಅನ್ಯಾಯ ಮಾಡಿದರೆ ದೈವವೇ ಅದಕ್ಕೆ ಶಿಕ್ಷೆ ಕೊಟ್ಟಂತಹ ನಿದರ್ಶನ ತುಳುನಾಡಿನಲ್ಲಿದೆ. ಎಲ್ಲರ ಬೆಂಬಲ ಪಡೆದು ಬಿಜೆಪಿ ಹೋರಾಟ ನಡೆಸಲಿದೆ. ತುಳುನಾಡಿನ ಆಚಾರ ವಿಚಾರಗಳಿಗೆ ಕಿಂಚಿತ್ ಧಕ್ಕೆಯಾದರೂ ಸಹಿಸಲಾಗದು. ಈ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.