ಮಂಗಳೂರು,ಫೆ.21(DaijiworldNews/TA): ಮಧ್ಯ ಏಷ್ಯಾದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ ಯುಎಇಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಅಂತರರಾಷ್ಟ್ರೀಯ ವ್ಯಾಪಾರ ಸಮೂಹವಾದ ತುಂಬೆ ಗ್ರೂಪ್, ಫರ್ಗಾನಾ ಮೆಡಿಕಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (FMIPH) ಸಹಯೋಗದೊಂದಿಗೆ ತುಂಬೆ ಫರ್ಗಾನಾ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ (TFCOMS) ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಈ ಯೋಜನೆಯ ಪಾಲುದಾರಿಕೆಯು ಎರಡೂ ಸಂಸ್ಥೆಗಳ ಆರ್ಥಿಕ ಸಹಕಾರ ಬಳಸಿಕೊಂಡು ವಿಶ್ವ ದರ್ಜೆಯ ವೈದ್ಯಕೀಯ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿರುವುದಾಗಿ ಪ್ರಕಟನೆ ತಿಳಿಸಿದೆ. ತುಂಬೆ ಗ್ರೂಪ್ನ ಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ತುಂಬೆ ಮೊಯ್ದಿನ್ ಅವರು ಈ ಯೋಜನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು “FMIPH ನೊಂದಿಗೆ ನಮ್ಮ ಸಹಯೋಗವು ಜಾಗತಿಕವಾಗಿ ವೈದ್ಯಕೀಯ ಶಿಕ್ಷಣವನ್ನು ಮುನ್ನಡೆಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಇಂದಿನ ಆಧುನಿಕ ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನದೊಂದಿಗೆ ಭವಿಷ್ಯದ ಆರೋಗ್ಯ ವೃತ್ತಿಪರರನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾದ ಉನ್ನತ ಶಿಕ್ಷಣವನ್ನು TFCOMS ನೀಡಲಿದೆ ಎಂದು ತಿಳಿಸಿದ್ದಾರೆ. TFCOMS ಮಹತ್ವಾಕಾಂಕ್ಷಿ ವೈದ್ಯಕೀಯ ವೃತ್ತಿಪರರನ್ನು ತರಬೇತುಗೊಳಿಸಲು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಶಿಕ್ಷಣ ಸಂಸ್ಥೆಯಾಗಲಿದೆ.
ಪ್ರಮುಖ ಗ್ರಾಜುಯೇಟ್ ಎಂಟ್ರಿ ಡಾಕ್ಟರ್ ಆಫ್ ಮೆಡಿಸಿನ್ (MD) ಶಿಕ್ಷಣವು ಜಾಗತಿಕ ವೈದ್ಯಕೀಯ ಶಿಕ್ಷಣ ಮಾನದಂಡಗಳಿಗೆ ಅನುಗುಣವಾಗಿ ನಾಲ್ಕು ವರ್ಷಗಳ ಪಠ್ಯಕ್ರಮವಾಗಿದೆ. ಈ ಶಿಕ್ಷಣ ಸುಧಾರಿತ ವೈದ್ಯಕೀಯ ತಂತ್ರಜ್ಞಾನಗಳು, ಸಕ್ರಿಯ ಕಲಿಕಾ ವಿಧಾನಗಳು ಮತ್ತು ವೈವಿಧ್ಯಮಯ ಆರೋಗ್ಯ ರಕ್ಷಣಾ ವಿಷಯದಲ್ಲಿ ಕರಾರುವಕ್ಕಾದ ಕ್ಲಿನಿಕಲ್ ತರಬೇತಿಯನ್ನು ನೀಡಲಿದೆ ಎಂದು ತಿಳಿಸಿದರು.