ಬಂಟ್ವಾಳ, ಫೆ.21 (DaijiworldNews/AA): ನಿವೃತ್ತ ಐಪಿಎಸ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಕೆ. ಅವರು ಇದೇ ಮೊದಲ ಬಾರಿಗೆ ಫೆ.25 ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಆಗಮಿಸಲಿದ್ದು, ಅಂದು ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಆಶ್ರಯದಲ್ಲಿ 'ಪ್ರಚಲಿತ ಭಾರತ: ಸತ್ಯ- ಮಿಥ್ಯ' ಎಂಬ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಲಿದ್ದಾರೆ ಎಂದು ವಿದ್ಯಾಕೇಂದ್ರದ ಸಂಸ್ಥಾಪಕರು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ತಿಳಿಸಿದ್ದಾರೆ.

ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಯುವ ಸಮುದಾಯದ ಆಕರ್ಷಣೆಯಾಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ನಿಗದಿತ ಸಮಯಕ್ಕೆ ಮುಂಚೆಯೇ ಆಗಮಿಸಿ ವಿದ್ಯಾಕೇಂದ್ರದ ಮಕ್ಕಳ ಚಟುವಟಿಕೆಯನ್ನು ವೀಕ್ಷಿಸಲಿದ್ದಾರೆ. ಬಳಿಕ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ 'ನನ್ನ ದೇಶ, ನನ್ನ ಹೊಣೆಗಾರಿಕೆ' ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಬಳಿಕ ಎರಡನೇ ಅವಧಿಯಲ್ಲಿ ಬೆಂಗಳೂರಿನ ಇತಿಹಾಸ ಸಂಶೋಧಕ ಡಾ. ವಿಕ್ರಮ್ ಸಂಪತ್ ಅವರು ಕಲಿತಪಾಠಗಳು-ಅರಿಯದನೋಟಗಳು' ಎಂಬ ವಿಷಯವನ್ನು ಮಂಡಿಸಲಿದ್ದಾರೆ. 3 ನೇ ಅವಧಿಯಲ್ಲಿ ಬೆಂಗಳೂರಿನ ನ್ಯಾಯವಾದಿ ಕ್ಷಮಾ ನರಗುಂದ ನರೇಟಿವ್ (ಕಥನ/ ಅಖ್ಯಾನ) ಹಾಗೆಂದರೇನು? ಎಂಬ ವಿಷಯವನ್ನು ಮಂಡಿಸುವರು. 4ನೇ ಅವಧಿಯಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ 'ಇಸ್ರೇಲ್ -ನಾವರಿಯದ ಸತ್ಯಗಳು' ಎಂಬ ವಿಷಯವನ್ನು ಮಡಿಸಲಿದ್ದಾರೆ. ಪ್ರತಿ ವಿಷಯ ಮಂಡನೆಯಾದ ಬಳಿಕ ಪ್ರಶೋತ್ತರ, ಸಂವಾದಕ್ಕೂ ಅವಕಾಶವಿರಲಿದೆ ಎಂದು ಡಾ.ಭಟ್ ತಿಳಿಸಿದರು.
2009-10ನೇ ಶೈಕ್ಷಣಿಕ ವರ್ಷದಲ್ಲಿ ಆರಂಭಗೊಂಡ ಪದವಿ ವಿಭಾಗದ ಆರಂಭಿಕ ದಿನಗಳಿಂದಲೂ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ವಿಚಾರಸಂಕಿರಣವನ್ನು ಆಯೋಜಿಸುತ್ತಾ ಬಂದಿದ್ದು, ವಿಶ್ವವಿದ್ಯಾನಿಲಯಗಳ ಎಲ್ಲಾ ಕಾಲೇಜುಗಳಲ್ಲೂ ಯುಜಿಸಿ ಪ್ರಾಯೋಜಿತ ಅನೇಕ ವಿಚಾರಸಂಕಿರಣ ಗಳು ನಡೆಯುತ್ತವೆಯಾದರೂ, ಅವೆಲ್ಲಕ್ಕೂ ಭಿನ್ನವಾಗಿ ಪ್ರಸಕ್ತ ವಿದ್ಯಮಾನಗಳು, ಇಂದಿನ ಅನಿ ವಾರ್ಯತೆಗಳನ್ನು ಪೂರೈಸುವ ವಿಚಾರಗಳ ಬಗ್ಗೆ ವಿಚಾರಸಂಕಿರಣ ನಡೆಸಲಾಗುತ್ತಿದೆ ಎಂದರು.
ಪ್ರಸ್ತುತ ಸಮಾಜವು ಸತ್ಯವನ್ನು ಮರೆಮಾಚಿ ಸುಳ್ಳನ್ನೇ ಸತ್ಯವೆಂದು ಬಿಂಬಿಸಿ ಸತ್ಯವನ್ನು ಸುಳ್ಳಿನಂತೆ, ಸುಳ್ಳನ್ನು ಸತ್ಯವೆಂಬಂತೆ ತೋರಿಸಿ ಸಮಾಜವನ್ನು ಸುಳ್ಳಿನ ಸಾಮ್ರಾಜ್ಯದತ್ತ ಕರೆದೊಯ್ಯುತ್ತಿದೆ. ಸತ್ಯವನ್ನು ಮರೆಮಾಚಿರುವ ಮಿಥೈಯೆಂಬ ಪರದೆಯನ್ನು ಸರಿಸಿ, ಭ್ರಮೆಯನ್ನು ಹೋಗಲಾಡಿಸಲು, ಪ್ರಚಲಿತ ಭಾರತದಲ್ಲಿ ನಡೆಯುವ ವಿದ್ಯಮಾನಗಳ ಸತ್ಯಾಂಶದ ಜ್ಞಾನವನ್ನು ಮೂಡಿ ಮೂಡಿಸುವ ಉದ್ದೇಶದಿಂದ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯಗಳ 60ಕ್ಕೂ ಹೆಚ್ಚು ಕಾಲೇಜುಗಳು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಅನೇಕ ಪ್ರತಿನಿಧಿಗಳು ಈಗಾಗಲೇ ನೋಂದಣಿ ಮಾಡಿಸಿದ್ದಾರೆ. ಅವರಿಗೆ ವಸತಿ, ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಸುಮಾರು 750ಕ್ಕೂ ಅಧಿಕ ಮಂದಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ, ಉಪಪ್ರಾಂಶುಪಾಲರಾದ ಸುರೇಖ, ಯತಿರಾಜ್ ಉಪಸ್ಥಿತರಿದ್ದರು.