ಉಡುಪಿ, ಫೆ.22 (DaijiworldNews/AA): ಪರ್ಕಳ ಪೇಟೆಯ ಬಡಗುಬೆಟ್ಟು ತಿರುವಿನಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಂದು ಸಂಭವಿಸಿದೆ.

ಮೃತರನ್ನು ಶೇಡಿಗುಡ್ಡೆ ನಿವಾಸಿ ರಮೇಶ್ ನಾಯಕ್ (55) ಎಂದು ಗುರುತಿಸಲಾಗಿದೆ
ರಮೇಶ್ ನಾಯಕ್ ಅವರು ಕಾರು ಇಳಿದು ಬೀಡ ತೆಗೆದುಕೊಳ್ಳಲು ಪಕ್ಕದ ರಸ್ತೆಯಲ್ಲಿರುವ ಅಂಗಡಿಗೆ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಮೇಶ್ ನಾಯಕ್ ಅವರನ್ನು ಕಾರು ಸುಮಾರು ದೂರದವರೆಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಅವರ ತಲೆಗೆ ಗಂಭೀರವಾದ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸ್ಥಳವು ಅಪಾಯಕಾರಿ ತಾಣವಾಗಿ ಮಾರ್ಪಟ್ಟಿದ್ದು, ಇಲ್ಲಿ ಪದೇ ಪದೇ ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ. ಮಧ್ಯದಲ್ಲಿ ಡಿವೈಡರ್ ಇಲ್ಲದಿರುವುದು ಮತ್ತು ಗುತ್ತಿಗೆದಾರರು ರಸ್ತೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸದಿರುವುದು ಪ್ರದೇಶದಲ್ಲಿ ಹೆಚ್ಚುತ್ತಿರುವ ಅಪಘಾತಗಳಿಗೆ ಕಾರಣವಾಗಿದೆ. ಈ ಜಂಕ್ಷನ್ನಲ್ಲಿ ಈವರೆಗೆ ಕನಿಷ್ಠ ಐದು ಮಂದಿ ಪಾದಚಾರಿಗಳು ಅಪಘಾತದಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.