ಸುಳ್ಯ, ಫೆ.21(DaijiworldNews/TA): ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ತನ್ನನ್ನು ನೇಮಿಸಿದ ಆದೇಶಕ್ಕೆ ಕೆ.ಪಿ.ಸಿ.ಸಿ. ತಾತ್ಕಾಲಿಕ ತಡೆಯಾಜ್ಞೆ ನೀಡಿರುವ ಕಾರಣ ಫೆ.24 ರಂದು ನಡೆಯಬೇಕಾಗಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ನಿಯೋಜಿತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ತಿಳಿಸಿದ್ದಾರೆ. ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಫೆ.21ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಿನ್ನೆ ಸಂಜೆ ಕೆ.ಪಿ.ಸಿ.ಸಿ. ಕಚೇರಿಯಿಂದ ನನಗೆ ಫೋನ್ ಬಂದು, ವಾಟ್ಸಾಪಲ್ಲಿ ತಡೆಯಾಜ್ಞೆಯ ಆದೇಶ ಕೂಡ ಬಂದಿತು. ಆದ್ದರಿಂದ ನಾನು ಪದಗ್ರಹಣವನ್ನು ಮುಂದೂಡಿದ್ದೇನೆ. ಮುಂದೆ ಕೆ.ಪಿ.ಸಿ.ಸಿ. ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ಏನು ತೀರ್ಮಾನ ಕೈಗೊಂಡರೂ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ ಬೊಳ್ಳೂರುರವರು " ಈ ತಡೆಯಾಜ್ಞೆಯಿಂದ ನನಗೇನೂ ಬೇಸರವಾಗಿಲ್ಲ. ಆದರೆ ಕಾರ್ಯಕರ್ತರಿಗೆ ನೋವಾಗಿದೆ. ಶಿಥಿಲಗೊಂಡಿರುವ ಕಾಂಗ್ರೆಸ್ ಸಂಘಟನೆಯನ್ನು ಮತ್ತೆ ಕಟ್ಟುವೆನೆಂಬ ವಿಶ್ವಾಸ ಅವರಿಗಿದೆ' ಎಂದರು.
ಪತ್ರಿಕಾಗೋಷ್ಠಿ ಯಲ್ಲಿ ಗೋಕುಲದಾಸ್, ಡೇವಿಡ್ ಧೀರ ಕ್ರಾಸ್ತಾ, ರಾಜು ಪಂಡಿತ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಂರಾಜ್ ಸಂಕೇಶ, ಎಂ.ಜೆ.ಶಶಿಧರ್, ಜಯಪ್ರಕಾಶ್ ನೆಕ್ರೆಪ್ಪಾಡಿ ಮೊದಲಾವರು ಉಪಸ್ಥಿತರಿದ್ದರು.