ಮಂಗಳೂರು, ಫೆ.22 (DaijiworldNews/AA): ಕೈದಿಗಳ ಪುನಃಶ್ಚೇತನಕ್ಕೆ ದಾರಿ ತೋರಿಸುವ ಉದ್ದೇಶದಿಂದ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಂದಲೇ ಗಿಡಗಳನ್ನು ಬೆಳೆಸಲಾಯಿತು. ಆದರೆ ಇದೀಗ ಕೈದಿಗಳು ಬೆಳೆಸಿದ ಗಿಡಗಳು ಸರಿಯಾದ ನಿರ್ವಹಣೆಯಿಲ್ಲದೆ ಸೊರಗಿ ಹೋಗಿದೆ.

ಹೌದು ಜೈಲಿನಲ್ಲಿ ಕೈದಿಗಳು ಪೋಷಿಸಿ, ಬೆಳೆಸಿದ ವಿವಿಧ ಗಿಡಗಳನ್ನು ಮಾರಾಟ ಮಾಡಲು ನಗರದ ಜೈಲ್ ರಸ್ತೆಯ ಜಿಲ್ಲಾ ಕಾರಾಗೃಹದ ಎದುರು ಭಾಗದಲ್ಲಿ ‘ಸಸಿ ಮಾರಾಟ ಕೇಂದ್ರ’ವನ್ನು ತೆರೆಯಲಾಗಿದೆ.
ಇಲ್ಲಿ ವಿವಿಧ ಬಗೆಯ ಸಸಿಗಳನ್ನು ಇಡಲಾಗಿದ್ದು, ಅವುಗಳು ನೀರು ಕಾಣದೆ ತಿಂಗಳುಗಳೇ ಕಳೆದಿದೆ . ಹೆಚ್ಚಿನ ಸಸಿಗಳು ಬಾಡಿ ಒಣಗಿ ಹೋಗಿದೆ.
ಈ ಹಿಂದೆ ಜಿಲ್ಲಾಧಿಕಾರಿ, ಸೆಷನ್ಸ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಮಾರ್ಗದರ್ಶನದಂತೆ ಕಾರಾಗೃಹದ ಅಧೀಕ್ಷಕರ ನೇತೃತ್ವದಲ್ಲಿ ಕೈದಿಗಳು ಗಿಡಗಳನ್ನು ಸಿದ್ಧಪಡಿಸಿದ್ದರು. ಹೀಗಾಗಿ ಸಿದ್ದ ಪಡಿಸಿದ ಗಿಡಗಳ ಮಾರಾಟಕ್ಕೆ ಮಾರುಕಟ್ಟೆಯ ಉದ್ದೇಶದಿಂದ ವರ್ಷದ ಹಿಂದೆ ಸಸಿ ವಿತರಣ ಕೇಂದ್ರ ನಿರ್ಮಿಸಲಾಯಿತು.
ಆದರೆ ದುರದೃಷ್ಟ ಅಂದರೆ ಸಸಿ ಮಾರಾಟ ಕೇಂದ್ರದ ಒಳಗೆ ಹೊರಗೆ ಬೀಗ ಜಡಿದು, ಗಿಡಗಳು ಹಾಗೆಯೇ ಇಡಲಾಗಿದೆ. ಇದರಿಂದಾಗಿ ನಿರ್ವಹಣೆ ಮರೀಚೆಯಾಗಿದೆ.ಇಷ್ಟೇ ಅಲ್ಲ ಗಿಡಗಳ ಕುರಿತು ಸಾರ್ವಜನಿಕರ ಗಮನ ಸೆಳೆಯಲು, ಮಾಹಿತಿ ನೀಡಲು ಯಾವುದೇ ಸಿಬಂದಿ ಕೂಡ ಇಲ್ಲ.
ಈ ಹಿಂದೆ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಪ್ರೊ| ಎಡ್ಮಂಡ್ ಫ್ರಾಂಕ್ ಅವರ ನೇತೃತ್ವದ ಸಂಪನ್ಮೂಲ ವ್ಯಕ್ತಿಗಳ ತಂಡ ಔಷಧೀಯ, ಆಯುರ್ವೇದಿಕ್, ಅಲಂಕಾರಿಕ ಗಿಡಗಳ ಪೋಷಣೆ ಕುರಿತು ಕೈದಿಗಳಿಗೆ ಎರಡು ವರ್ಷಗಳ ಹಿಂದೆಯೇ ತರಬೇತಿ ನೀಡಿತ್ತು. ಜೈಲಿನ ಕೈದಿಗಳು ಉತ್ಸುಕರಾಗಿಯೇ ಈ ಕಾರ್ಯದಲ್ಲಿ ತೊಡಗಿಕೊಂಡರು. ಬೆಳೆಸಿದ ಗಿಡಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಜೈಲು ಮುಂಭಾಗದಲ್ಲಿಯೇ ಕೊಠಡಿಯನ್ನು ಸಿದ್ಧಪಡಿಸಲಾಗಿತ್ತು. ಆದರೆ ಈಗ ಗಿಡಗಳ ಪರಿಸ್ಥಿತಿಯನ್ನು ನೋಡಿದಾಗ ನೀರಿಲ್ಲದೆ ಸೊರಗಿ ಹೋಗಿದೆ.ಮಾರಾಟ ಮಾಡಲು ಯೋಗ್ಯವಲ್ಲದಾಗಿದೆ.