ಉಡುಪಿ, ಫೆ.22 (DaijiworldNews/AA): ಮೂಡುಬೆಳ್ಳೆಯ ಕುದ್ರಮಲೆ ಎಂಬಲ್ಲಿ ದುಷ್ಕರ್ಮಿಗಳು ಪವಿತ್ರ ಶಿಲುಬೆಗೆ ಹಾನಿ ಮಾಡಿದ ಘಟನೆಯನ್ನು ಭಾರತೀಯ ಕ್ರಿಶ್ಚಿಯನ್ ಫೆಡರೇಶನ್ ತೀವ್ರವಾಗಿ ಖಂಡಿಸಿದೆ. ಈ ಕೃತ್ಯಕ್ಕೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸುವಂತೆ ಫೆಡರೇಶನ್ ಆಗ್ರಹಿಸಿದೆ. ಈ ಘಟನೆಯು ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಪ್ರಶಾಂತ್ ಜತ್ತನ್ನ ಹೇಳಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಭಾರತೀಯ ಕ್ರಿಶ್ಚಿಯನ್ ಫೆಡರೇಶನ್ನ ರಾಜ್ಯ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ಸುಮಾರು 30 ವರ್ಷಗಳ ಹಿಂದೆ ಜೋಸೆಫ್ ವೆಲೇರಿಯನ್ ಲೋಬೋ ಅವರು ತಮ್ಮ ಖಾಸಗಿ ಜಮೀನಿನಲ್ಲಿ ಪವಿತ್ರ ಶಿಲುಬೆಯನ್ನು ಸ್ಥಾಪಿಸಿದರು. ಅಂದಿನಿಂದ ಸುಮಾರು 30 ಕ್ರಿಶ್ಚಿಯನ್ ಕುಟುಂಬಗಳು ಪ್ರತಿ ವರ್ಷ ಅಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದೆ ಎಂದರು.
ಈ ಘಟನೆಯು ಕ್ರಿಶ್ಚಿಯನ್ ಸಮುದಾಯವನ್ನು ಸಂಕಟಕ್ಕೆ ದೂಡಿದೆ. ಈ ಪ್ರದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕದಡಲು ಪೂರ್ವನಿಯೋಜಿತ ಕೃತ್ಯವೆಂದು ಸಮುದಾಯದ ಸದಸ್ಯರು ನಂಬಿದ್ದಾರೆ. ಉಡುಪಿ ಜಿಲ್ಲೆಯು ವಿವಿಧ ಧರ್ಮಗಳ ನಡುವಿನ ಶಾಂತಿಯುತ ಸಹಬಾಳ್ವೆಗೆ ಹೆಸರುವಾಸಿಯಾಗಿದೆ. ಇಂತಹ ಘಟನೆಗಳು ಸಾಮರಸ್ಯ ಕದಡಲು ಉಂಟುಮಾಡುವ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಈ ಘಟನೆಯ ಬಗ್ಗೆ ಫ್ಲಾಲಿವೀನ್ ಫೆರ್ನಾಂಡಿಸ್ ಅವರು ಶಿರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.