ವರದಿ:ಹರಿಪ್ರಸಾದ್ ನಂದಳಿಕೆ.
ಬೆಳ್ಮಣ್, ಜೂ 13(Daijiworld News/MSP): ನದಿಯ ನೀರು ಕಡಲು ಸೇರಲೇ ಬೇಕು ಎನ್ನುವ ಹಿರಿಯರ ಮಾತಿಗೆ ತದ್ವಿರುದ್ಧವಾಗಿ ಇದೀಗ ಸಾಗರದ ನೀರು ನದಿಗೆ ಹರಿದು ವೈಚಿತ್ರ್ಯ ಸೃಷ್ಠಿಯಾಗಿದೆ. ಕಳೆದೆರಡು ದಿನಗಳಿಂದ ನಿರಂತರವಾಗಿದ್ದರೂ ಸಾಧಾರಣ ಮಳೆ ಸುರಿಯುತ್ತಿದ್ದು ಪಡುವಣ ಕಡಲು ಉಕ್ಕೇರಿ ಮುಂಡ್ಕೂರು ಸಂಕಲಕರಿಯದವರೆಗೆ ಕಡಲ ನೀರು ಹರಿದಿದ್ದು ಇಲ್ಲಿನ ಶಾಂಭವಿ ನದಿಯಲ್ಲಿ ಉಪ್ಪು ನೀರು ತುಂಬಿದೆ.
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯ ಶಾಂಭವಿ ನದಿಯಲ್ಲಿ ಇದೀಗ ಉಪ್ಪು ನೀರು ತುಂಬಿದ್ದು ಈ ಭಾಗದ ಜನ ಆತಂಕಕೀಡಾಗಿದ್ದಾರೆ. ಈ ಹಿಂದೆಯೂ ಸಮುದ್ರದ ನೀರು ನದಿಯೊಳಗೆ ಹರಿದಿದ್ದರೂ ಮುಲ್ಕಿಗೆ ಅಕ್ಕ ಪಕ್ಕದ ಊರುಗಳ ವರೆಗೆ ಉಕ್ಕೇರುತ್ತಿತ್ತು. ಆದರೆ ಈ ಬಾರಿ ಇನ್ನೂ ಮುಂದುವರಿದು ಮುಂಡ್ಕೂರು, ಸಂಕಲಕರಿಯದವರೆಗೆ ನೀರು ವ್ಯಾಪಿಸಿದೆ. ಸಂಕಲಕರಿಯ ಸೇತುವೆ ಬಳಿಯ ಅಣೆಕಟ್ಟುವರೆಗೆ ಈ ಉಪ್ಪುನೀರು ತುಂಬಿದ್ದು ಅಚ್ಚರಿಗೆ ಕಾರಣವಾಗಿದೆ.
ಪಲಿಮಾರು ಅಣೆಕಟ್ಟು ತೆರವು ಕಾರಣ..?
ಪಲಿಮಾರು ಅಣೆಕಟ್ಟನ್ನು ನಿರ್ವಾಹಕರು ತೆರೆದ ಪರಿಣಾಮವಾಗಿ ಏಕಾಏಕಿ ಸಮುದ್ರದ ನೀರು ಮೇಲೇರಿ ಬಂದಿರಬಹುದೆಂದು ಬಳ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪುತ್ರನ್ ತಿಳಿಸಿದ್ದಾರೆ. ಪಲಿಮಾರುವಿನಲ್ಲಿ ಇದೀಗ ಇರುವ ಅಣೆಕಟ್ಟು ಬಿರುಕು ಬಿಟ್ಟು ನೀರು ಭಾರೀ ಪ್ರಮಾಣದಲ್ಲಿ ಪೋಲಾಗುತ್ತಿರುವುದರಿಂದ ಕೃಷಿಕರ ಬೇಡಿಕೆಯಂತೆ ಅದರ ಪಕ್ಕದಲ್ಲಿಯೇ ಇನ್ನೊಂದು ವ್ಯವಸ್ಥಿತ ಅಣೆಕಟ್ಟು ನಿರ್ಮಾಣಗೊಳ್ಳುತ್ತಿದೆ. ಈ ಕಾಮಗಾರಿ ಜನ ಇತ್ತೀಚೆಗೆ ನೀರಿಗೆ ತಡೆ ಒಡ್ಡಿದ್ದು ಮಳೆಯ ಪರಿಣಾಮ ನದಿ ತುಂಬಾ ನೀರು ತುಂಬಿತ್ತು. ಅದನ್ನೂ ಕಳೆದೆರಡು ದಿನಗಳ ಹಿಂದೆ ತೆರವುಗೊಳಿಸಲಾಗಿತ್ತು. ಮರುದಿನವೇ ಸಮುದ್ರದ ಉಪ್ಪುನೀರು ಶಾಂಭವೀ ನದಿ ಪ್ರವೇಶಿಸಿದೆ.
ಕೃಷಿಕರು ಕಂಗಾಲು :
ಈಗಾಗಲೇ ಮುಂಗಾರು ಮಳೆ ವಿಳಂಬವಾಗಿರುವುದರಿಂದ ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿದ್ದು ಇದೀಗ ನದಿಗೆ ಉಪ್ಪು ನೀರು ಪ್ರವೇಶದಿಂದ ಈ ನೀರು ಕೃಷಿಗೆ ಅಯೋಗ್ಯವಾಗಿರುವ ಹಿನ್ನೆಲೆಯಲ್ಲಿ ಮುಂಡ್ಕೂರು, ಉಳೆಪಾಡಿ, ಏಳಿಂಜೆ, ಸಂಕಲಕರಿಯ, ಪಲಿಮಾರು, ಬಳ್ಕುಂಜೆ, ಕರ್ನಿರೆ, ಮಟ್ಟು ಭಾಗದ ಕೃಷಿಕರು ಆತಂಕಕ್ಕೊಳಗಾಗಿದ್ದಾರೆ. ನದಿಯ ನೀರು ಬಳಸಿ ನೇಜಿಗಾಗಿ ಬಿತ್ತನೆಯ ಚಿಂತನೆ ನಡೆಸುತ್ತಿರುವ ಕೃಷಿಕರಿಗೆ ಶಾಂಭವಿ ನದಿಗೆ ಉಪ್ಪು ನೀರು ಪ್ರವೇಶ ಹಿನ್ನಡೆ ಉಂಟು ಮಾಡಿದೆ. ಅದೇ ರೀತಿ ನದಿಯ ನೀರಿನ ಒರತೆ ಇರುವ ಈ ಭಾಗದ ಬಾವಿಗಳಲ್ಲಿಯೂ ಉಪ್ಪು ನೀರಿನ ಒರತೆ ಉಂಟಾಗಿ ಕುಡಿಯುವ ನೀರಿಗೂ ತೊಂದರೆಯಾಗುವ ಸಾಧ್ಯತೆಗಳಿವೆ ಎಂದು ಈ ಭಾಗದ ಗ್ರಾಮಸ್ಥರು ಆರೋಪಿಸಿದ್ದಾರೆ.
ಗಾಳಿ ನಿಂತರೆ ಈ ಹರಿವು ನಿಲ್ಲಬಹುದು
ಹವಾಮಾನ ವೈಪರೀತ್ಯದ ಪರಿಣಾಮ ಇದೀಗ ನಿರಂತರವಾಗಿ ಗಾಳಿ ಬೀಸುತ್ತಿರುವುದರಿಂದ ಸಮುದ್ರದ ನೀರು ನದಿಗೆ ತುಂಬಿದೆ ಎಂದು ಹೇಳಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಗಾಳಿ ಕಡಿಮೆಯಾಗಿ ಈ ಉಪ್ಪು ನೀರು ಹರಿವು ಕಡಿಮೆಯಾಗಬಹುದು ಎಂಬ ಆಶಯವನ್ನು ಈ ಬಾಗದ ಕೃಷಿಕರು ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆಯಾಗಿ ಮೊದಲ ಬಾರಿ ಸಂಕಲಕರಿಯದ ವರೆಗೆ ಪಡುವಣ ಕಡಲಿನ ಉಪ್ಪುನೀರು ವ್ಯಾಪಿಸಿದ್ದು ಈ ಭಾಗದ ಜನರಲ್ಲಿ ಒಂದಿಷ್ಟು ಆತಂಕದ ಜತೆ ಕುತೂಹಲವನ್ನೂ ಹೆಚ್ಚಿಸಿದೆ. ಸಂಕಲಕರಿಯದವರೆಗೆ ಉಪ್ಪು ನೀರು ವ್ಯಾಪಿಸಿದ್ದು ಇದೇ ಮೊದಲು. ಈ ನೀರಿನಿಂದ ಕೃಷಿಕರಿಗೆ ತೊಂದರೆಯಾಗಲಿದೆ. ಕೃಷಿ ಬಳಕೆಗೆ ಈ ನೀರು ಸೂಕ್ತವಲ್ಲ. ಕುಡಿಯುವ ನೀರಿನ ಬಾವಿಗಳಿಗೂ ಇದರ ಒರತೆ ಉಂಟಾದಲ್ಲಿ ತೊಂದರೆಯಾಗಲಿದೆ.