ಉಡುಪಿ, ಫೆ.23(DaijiworldNews/TA): ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ. 25ರಿಂದ ಮಾ. 5ರವರೆಗೆ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯಿಂದ ದಕ್ಷಿಣ ವಾಹಿನಿ ಬೃಹತ್ ಹೊರೆ ಕಾಣಿಕೆ ಸಮರ್ಪಣಾ ಶೋಭಾಯಾತ್ರೆ ಸಹಿತ ಮೆರವಣಿಗೆ ನಡೆಯಿತು.










ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣ, ಮಂಗಳೂರು, ಮೂಡುಬಿದಿರೆ, ಸಹಿತ ವಿವಿಧ ಪ್ರದೇಶಗಳಿಂದ ನೂರಾರು ವಾಹನಗಳ ಮೂಲಕ ಹಸಿರುವಾಣಿ ಹೊರೆಕಾಣಿಕೆ ಹರಿದು ಬಂತು. ಹೊರೆಕಾಣಿಕೆಯನ್ನು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ವ್ಯವಸ್ಥಾಪನಾ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಮುಖರ ಉಪಸ್ಥಿತಿಯಲ್ಲಿ ಹೊರೆ ಕಾಣಿಕೆ ಸರ್ಮಣಾ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 660 ಸ್ವಾಗತಿಸಲಾಯಿತು.
ನೂರಾರು ವಾಹನಗಳಿದ್ದರೂ ಮೆರವಣಿಗೆ ಶಿಸ್ತು ಬದ್ಧವಾಗಿ ಸಾಗಿ ಬಂದಿದ್ದು, ಪೊಲೀಸರು, ಸ್ವಯಂ ಸೇವಕರು ಎಲ್ಲಿಯೂ ಸಂಚಾರ ಅಸ್ತವ್ಯಸ್ತಗೊಳ್ಳದಂತೆ ಎಚ್ಚರ ವಹಿಸಿದ್ದರು. ವೈಭವದ ಮೆರವಣಿಗೆ ಕಲಶ ಹಿಡಿದ ನೂರಾರು ಮಹಿಳೆಯರು, ಪೇಟಧಾರಿ ಪುರುಷರು, ಗಣ್ಯರು ಹಾಗೂ ವಿವಿಧ ಸಾಂಪ್ರದಾಯಿಕ ಡೋಲು ತಂಡಗಳು, ತಾಲೀಮು, ವಾದ್ಯ, ಬ್ಯಾಂಡ್, ಕೊಂಬು, ಬಿರುದಾವಳಿ, ತಟ್ಟಿರಾಯ, ಕರಗ, ಕೀಲುಕುದುರೆ, ಸ್ಪೆಷಲ್ ಬ್ಯಾಂಡ್, ಮಹಿಳಾ ಚೆಂಡೆ, ಟ್ಯಾಬ್ಲೊ, ಭಜನಾ ತಂಡ, ಬೆಳ್ಳಿ ರಥ, ಹಾಗೂ ನೂರಾರು ಹೊರೆಕಾಣಿಕೆ ವಾಹನಗಳು ಹಾಗೂ ನೂರಾರು ಹೊರೆಕಾಣಿಕೆ ವಾಹನಗಳು ಮೆರವಣಿಗೆಯ ರಂಗು ಹೆಚ್ಚಿಸಿದವು.