ಬೆಂಗಳೂರು, ಡಿ 4 : ನಗರದಲ್ಲಿ ಮೊಬೈಲ್ ಕಳ್ಳರ ಸರಗಳ್ಳರ ಪಿಕ್ ಪಾಕೆಟ್ ಮಾಡೋ ಕಳ್ಳರ ಸಂಖ್ಯೆ ಏನೂ ಕಡಿಮೆ ಇಲ್ಲ. ಈ ಹಿಂದೆ ಕಳ್ಳತನ ಮಾಡುತ್ತಿದ್ದ ಏರಿಯಾದಲ್ಲಿ ಪೊಲೀಸರ ಕಣ್ಣು ಬಿತ್ತೆಂದರೆ ಕಳ್ಳರು ಕಾಲಿಗೆ ಬುದ್ದಿ ಹೇಳುತ್ತಿದ್ದ ಕಾಲವೊಂದಿತ್ತು. ಇತ್ತೀಚೆಗೆ ಯಾಕೋ ಕಳ್ಳರು ಪೊಲೀಸರ ಮೇಲೆ ದಾಳಿ ಮಾಡುವ ಘಟನೆಗಳೇ ಹೆಚ್ಚಾಗಿ ಕೇಳಿಬರುತ್ತಿದೆ. ಬೆಂಗಳೂರಿನಲ್ಲೂ ಇಂಥದ್ದೇ ಘಟನೆ ನಡೆದಿದೆ. ಆರ್ ಎಂಸಿ ಯಾರ್ಡ್ ಕೈಗಾರಿಕಾ ಪ್ರದೇಶದಲ್ಲಿ ಡಿ 4 ರ ಮುಂಜಾನೆ ಈ ಘಟನೆ ನಡೆದಿದೆ. ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ್ದ ಅಶ್ವಥ್ ನ್ನು ಪೊಲೀಸರು ಬೆನ್ನತ್ತಿ ಸುತ್ತುವರೆದು ಬಂಧಿಸುವ ಪ್ರಯತ್ನ ಮಾಡುತ್ತಿದ್ದಾಗ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಗಾಳಿಯಲ್ಲಿ ಗುಂಡು ಹಾರಿಸಿ ದಾಳಿ ನಿಲ್ಲಿಸಿ ಶರಣಾಗುವಂತೆ ಹೇಳಿದರೂ ಮತ್ತೆ ಹಾಳಿ ಮಾಡಿ, ಪರಾರಿಯಾಗಲು ಯತ್ನಿಸಿದ್ದಾನೆ. ಕೊನೆಗೆ ವಿಧಿ ಇಲ್ಲದೆ ಫೈರಿಂಗ್ ನಡೆಸಿದ್ದಾರೆ. ಗಾಯಗೊಂಡ ಆರೋಪಿ ಕಳ್ಳ ಅಶ್ವಥ್ ಹಾಗೂ ಹಲ್ಲೆಯಿಂದ ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.