ಪುತ್ತೂರು, ಫೆ.25 (DaijiworldNews/AK): ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಬಳಿಕ ಮಹಿಳೆಯ ಹೊಟ್ಟೆಯೊಳಗೆ ಬ್ಯಾಂಡೆಜಿನ ಬಟ್ಟೆಯ ತುಂಡನ್ನು ಗರ್ಭಿಣಿ ಮಹಿಳೆಯ ಉದರದಲ್ಲೇ ಬಿಟ್ಟು ಹೊಲಿಗೆ ಹಾಕಿದ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಲು ಆರು ಅಧಿಕಾರಿಗಳು ಮತ್ತು ವೈದ್ಯರ ತಂಡ ಫೆ.24ರಂದು ಪುತ್ತೂರಿಗೆ ಭೇಟಿ ನೀಡಿತ್ತು.

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು. ಒಂದು ವಾರದಲ್ಲಿ ವಿಚಾರಣೆ ನಡೆಸಿ ಅಗತ್ಯ ಕ್ರಮಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಸಲಿದೆ.
ಘಟನೆ ನಡೆದ ಪುತ್ತೂರಿನ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ವಿಚಾರಿಸಿದೆವು.ಆಸ್ಪತ್ರೆಯಿಂದಲೂ ಮಾಹಿತಿ ಸಂಗ್ರಹಿಸಿದೆವು. ಹೆಚ್ಚುವರಿಯಾಗಿ ಮತ್ತೊಂದು ಆಸ್ಪತ್ರೆಗೆ ಭೇಟಿ ನೀಡಿ ಸ್ಕ್ಯಾನ್ ಪತ್ತೆ ಹಚ್ಚಿದ ಬಳಿಕ ಗೋಜಲು ತೆಗೆದಿದ್ದು, ಮಂಗಳವಾರವೂ ತನಿಖೆ ಮುಂದುವರಿಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಪತ್ರಿಕೆಗೆ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ 27 ರಂದು ಗಗನ್ದೀಪ್ ಅವರ ಪತ್ನಿ ಶರಣ್ಯ ಲಕ್ಷ್ಮಿ ಹೆರಿಗೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು ನಡೆಸಿದ ಆಫರೇಷನ್ ಸಂದರ್ಭದಲ್ಲಿ ಬ್ಯಾಂಡೇಜಿನ ಬಟ್ಟೆ ಹೊಟ್ಟೆಯಲ್ಲೇ ಉಳಿದುಕೊಂಡಿತ್ತು. ಡಿ. 2ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಕೆಲವು ದಿನಗಳಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಈ ಸಂಬಂಧ ಸ್ಕ್ಯಾ ನ್ ಮಾಡಿದಾಗ ಬಟ್ಟೆ ಹೊಟ್ಟೆಯಲ್ಲೇ ಉಳಿದುಕೊಂಡಿರುವುದು ಬೆಳಕಿಗೆ ಬಂದಿತ್ತು. ಬೇರೊಂದು ಆಸ್ಪತ್ರೆಯಲ್ಲಿ ಅದನ್ನು ಹೊರ ತೆಗೆಯಲಾಯಿತು ಎಂದು ಶರಣ್ಯ ಅವರ ಪತಿ ಗಗನ್ದೀಪ್ ಆರೋಪಿಸಿದ್ದರು.