ಮಂಗಳೂರು, ಫೆ.26(DaijiworldNews/TA): ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ನ ಮಂಗಳೂರು ಶಾಖೆಯಿಂದ ಸಿಎಸ್ಆರ್ ಯೋಜನೆಯಡಿ ಜಿಲ್ಲೆಯ 69 ಸರ್ಕಾರಿ ಕಾಲೇಜುಗಳ 462 ವಿದ್ಯಾರ್ಥಿನಿಯರಿಗೆ 37.28 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು.


ಮಲಬಾರ್ ಚಾರಿಟೆಬಲ್ ಟ್ರಸ್ಟ್ನಿಂದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯರಿಗಾಗಿ ದೊಡ್ಡ ಮೊತ್ತದ ವಿದ್ಯಾರ್ಥಿ ವೇತನ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿನಿಯರು ಕೂಡಾ ತಮ್ಮ ಖಾತೆಯಲ್ಲಿ ಈ ಹಣವನ್ನು ಕ್ರೋಢೀಕರಿಸಿಕೊಂಡು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಉಪಯೋಗಿಸಿಕೊಳ್ಳುವ ಮೂಲಕ ಸದ್ಬಳಕೆ ಮಾಡಬೇಕು ಎಂದರು. ‘ಶಿಕ್ಷಣ ಸಬಲೀಕರಣ, ಮಹಿಳಾ ಸಬಲೀಕರಣ’ ಎಂಬ ಧ್ಯೇಯ ವಾಕ್ಯದಡಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ಸ್ಟೋರ್ ಮುಖ್ಯಸ್ಥ ಶರತ್ಚಂದ್ರನ್, ಸಂಸ್ಥೆಯು ತನ್ನ ಲಾಭಾಂಶದ ಶೇ.5ರಷ್ಟನ್ನು ಪ್ರತಿವರ್ಷ ಸಿಎಸ್ಆರ್ ಯೋಜನೆಯಡಿ ವಿವಿಧ ಕಾರ್ಯಗಳಿಗೆ ಬಳಸುತ್ತಿದೆ. ರಾಜ್ಯದಲ್ಲಿ ಒಟ್ಟು 5501 ವಿದ್ಯಾರ್ಥಿಗಳಿಗೆ 4.74 ಕೋಟಿ ರೂ. ನೀಡಲಾಗಿದೆ.
ಸಂಸ್ಥೆಯ ಹಸಿವು ಮುಕ್ತ ಯೋಜನೆಯಡಿ ಮಂಗಳೂರು ನಗರದಲ್ಲಿ ಪ್ರತಿನಿತ್ಯ 500 ಮಂದಿಗೆ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ. ವೃದ್ಧ ಮಹಿಳೆಯರಿಗೆ ವಿವಿಧ ಕಡೆ ವೃದ್ಧಾಶ್ರಮ, ಶಾಲೆ ಬಿಟ್ಟವರಿಗೆ ಮೈಕ್ರೋ ಲೆಂಡಿಂಗ್ ಸೆಂಟರ್ಗಳು 12 ರಾಜ್ಯಗಳಲ್ಲಿ ಸಂಸ್ಥೆಯ ವತಿಯಿಂದ ಆರಂಭಿಸಲಾಗಿದೆ. ದೇಶದಲ್ಲಿ ಸಂಸ್ಥೆಯು ಈವರೆಗೆ ತನ್ನ ಸಿಎಸ್ಆರ್ ನಿಧಿಯಡಿ ವಿವಿಧ ಕಾರ್ಯಕ್ರಮಗಳಿಗೆ 282 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದ್ದು, ಕರ್ನಾಟಕದಲ್ಲಿ 40.88 ಕೋಟಿ ರೂ.ಗಳನ್ನು ಸಮಾಜಕ್ಕಾಗಿ ಒದಗಿಸಿದೆ ಎಂದು ಹೇಳಿದರು.
ಉಪ ಮೇಯರ್ ಭಾನುಮತಿ, ಮನಪಾ ಸದಸ್ಯ ಅಬ್ದುಲ್ ರವೂಫ್, ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ನ ನಿರ್ದೇಶಕ ಕರುಣಾಕರನ್ ಉಪಸ್ಥಿತರಿದ್ದರು. ರಫೀಕ್ ಮಾಸ್ಟರ್ ವಿದ್ಯಾರ್ಥಿಗಳಿಗೆ ಪ್ರೇರಣಾ ಮಾತುಗಳನ್ನಾಡಿ ಶುಭ ಹಾರೈಸಿದರು.